Tuesday, May 17, 2022
Home ಲೋಕಾಭಿರಾಮ ಆರೋಗ್ಯ ಟೊಮೆಟೋ ಜ್ವರ: ಎಚ್ಚರಿಕೆ ಅಗತ್ಯ

ಟೊಮೆಟೋ ಜ್ವರ: ಎಚ್ಚರಿಕೆ ಅಗತ್ಯ

ಸುದ್ದಿಕಿರಣ ವರದಿ
ಶುಕ್ರವಾರ, ಮೇ 13

ಟೊಮೆಟೋ ಜ್ವರ: ಎಚ್ಚರಿಕೆ ಅಗತ್ಯ
ಉಡುಪಿ: ಕೇರಳ- ತಮಿಳುನಾಡು ಗಡಿಯಲ್ಲಿರುವ ವಾಳಯಾರ್ ನಲ್ಲಿ 5 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಅಧಿಕ ಮಕ್ಕಳಲ್ಲಿ ಟೊಮೆಟೋ ಜ್ವರ ಕಂಡುಬಂದಿದ್ದು, ಉಡುಪಿ ಜಿಲ್ಲೆಯಲ್ಲಿ ಈ ರೋಗ ಲಕ್ಷಣ ಇದುವರೆಗೆ ಪತ್ತೆಯಾಗಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ಈ ಜ್ವರ ಪತ್ತೆಯಾದ ಕಾರಣ ಗಡಿಭಾಗದ ಜಿಲ್ಲೆಗಳಲ್ಲಿ ಈ ಕುರಿತು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಜ್ವರ ಕಾಣಿಸಿಕೊಳ್ಳುವ ಮಕ್ಕಳ ದೇಹದಲ್ಲಿ ಟೊಮೆಟೋ ಆಕಾರದ ಗುಳ್ಳೆಗಳು ಏಳುವುದರಿಂದ ಇದಕ್ಕೆ ಟೊಮೆಟೋ ಜ್ವರ ಎಂದು ಹೆಸರಿಡಲಾಗಿದ್ದು, ಈ ಜ್ವರ ವೈರಸ್ ನಿಂದ ಹರಡುತ್ತಿದ್ದು ಈ ಜ್ವರಕ್ಕೂ, ಕೊರೊನಾಗೂ ಯಾವುದೇ ಸಂಬಂಧವಿಲ್ಲ.

ಈ ಜ್ವರ, ಚಿಕೂನ್ಗುನ್ಯ ಲಕ್ಷಣ ಹೋಲುತ್ತಿದ್ದು ಜ್ವರ ಹಾಗೂ ಗುಳ್ಳೆ ಜೊತೆಗೆ ಕೆಮ್ಮು, ಶೀತ, ನಿರ್ಜಲೀಕರಣ ಉಂಟಾಗುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಸೋಂಕಿತ ಮಕ್ಕಳು ಕ್ವಾರಂಟೈನ್ ಆಗಬೇಕು ಹಾಗೂ ಗುಳ್ಳೆಗಳನ್ನು ಉಜ್ಜಬಾರದು.

ತೀವ್ರ ನಿಗಾ
ಜಿಲ್ಲೆಯ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಈ ಲಕ್ಷಣಗಳಿರುವ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇರಳದಿಂದ ಬರುವ ವ್ಯಕ್ತಿಗಳು, ಯಾತ್ರಿಕರು, ಮಕ್ಕಳ ಬಗ್ಗೆ ತೀವ್ರ ನಿಗಾ ವಹಿಸಬೇಕು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಜಿಲ್ಲೆಯ ಇತರ ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಲ್ಲಿಯೂ ಈ ರೋಗ ಲಕ್ಷಣ ಹೊಂದಿರುವ ಪ್ರಕರಣಗಳ ಕುರಿತು ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.

ಖಾಸಗಿ ಆಸ್ಪತ್ರೆ ಹಾಗೂ ಎಲ್ಲಾ ಮಕ್ಕಳ ತಜ್ಞರು ಈ ಜ್ವರದ ಲಕ್ಷಣ ಕಂಡುಬಂದಲ್ಲಿ ಪರೀಕ್ಷೆ ನಡೆಸಿ, ಮಾಹಿತಿ ನೀಡಬೇಕು.

ಸಾರ್ವಜನಿಕರು ಭೀತಿಗೊಳಗಾಗದೇ ಟೊಮೆಟೋ ಜ್ವರದ ಲಕ್ಷಣ ಬಗ್ಗೆ ಅರಿತು, ಶುದ್ಧತೆ ಕಾಪಾಡಿಕೊಳ್ಳಬೇಕು ಹಾಗೂ ನಿರ್ಜಲೀಕರಣವಾಗದಂತೆ ಹೆಚ್ಚಿನ ಗಮನಹರಿಸಿ, ಶುದ್ಧ ನೀರು ಸೇವಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!