Saturday, July 2, 2022
Home ಲೋಕಾಭಿರಾಮ ವ್ಯಸನದಿಂದ ದೂರವಿದ್ದಾಗ ಉತ್ತಮ ಆರೋಗ್ಯ

ವ್ಯಸನದಿಂದ ದೂರವಿದ್ದಾಗ ಉತ್ತಮ ಆರೋಗ್ಯ

ವ್ಯಸನದಿಂದ ದೂರವಿದ್ದಾಗ ಉತ್ತಮ ಆರೋಗ್ಯ

(ಸುದ್ದಿಕಿರಣ ವರದಿ)

ಉಡುಪಿ: ಜನಸಾಮಾನ್ಯರು ವ್ಯಸನದಿಂದ ದೂರವಿದ್ದಾಗ ಉತ್ತಮ ಆರೋಗ್ಯ ಹೊಂದುವ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಉಡುಪಿ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಐ.ಆರ್.ಪಿ.ಎ ಮತ್ತು ಸ್ವಯಂ ಸೇವಾಸಂಸ್ಥೆ ಉಡುಪಿ ಸಂಯುಕ್ತಾಶ್ರಯದಲ್ಲಿ ನಡೆದ ನಶಾ ಮುಕ್ತ ಭಾರತ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಈಚಿನ ದಿನಗಳಲ್ಲಿ ಯುವಜನತೆ ಹೆಚ್ಚಾಗಿ ದುಶ್ಟಟಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ದುಶ್ಟಟದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಅವುಗಳಿಂದ ದೂರವಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಜಿಲ್ಲೆಯಲ್ಲಿ 27 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೊರ ರಾಜ್ಯ ಸೇರಿದಂತೆ ದೇಶ ವಿದೇಶಗಳಿಂದ ಬರುತ್ತಿದ್ದಾರೆ. ಅವರಲ್ಲಿ ಕೆಲವರು ದುಶ್ಟಟ ಹೊಂದಿದ್ದಾರೆ. ಅವರು ಇತರರಿಗೂ ದುಶ್ಟಟಕ್ಕೆ ಮಾರುಹೋಗುವಂತೆ ಮಾಡುವ ಸಾಧ್ಯತೆ ಇರುತ್ತದೆ. ಅದಕ್ಕೆ ಕಡಿವಾಣ ಹಾಕಬೇಕು.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಪ್ರಸ್ತುತದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಸಭೆ ನಡೆಸುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಡ್ರಗ್ಸ್ ನಿಯಂತ್ರಣ ಮಾಡಬೇಕು ಎಂದು ಸೂಚನೆ ನೀಡಿದ್ದರು. ಅದರಂತೆ ಜಿಲ್ಲಾ ಪೋಲಿಸ್ ಇಲಾಖೆ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದರು.

ಕೊರೊನಾದಂಥ ಮಹಾಮಾರಿಯಿಂದ ದೂರವಿರಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಆದರೆ, ದುಶ್ಚಟ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಎಂದರು.

ಜಿಲ್ಲೆಯನ್ನು ನಶಾ ಮುಕ್ತವನ್ನಾಗಿಸಲು ಇಲಾಖೆಗಳು, ಸಂಘಸಂಸ್ಥೆಗಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕು ಎಂದ ಶಾಸಕ ಭಟ್, ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆ ಈ ದಿಸೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನ ಪಡೆದಿದೆ. ಆದರೆ, ನಶಾ ಯುಕ್ತ ಜಿಲ್ಲೆ ಪಟ್ಟಿಯಲ್ಲಿ ನಮ್ಮ ಜಿಲ್ಲೆ ಸೇರಿರುವುದು ದುರದೃಷ್ಟಕರ. ಅದರಿಂದ ಹೊರಬರಲು ಚಿಂತನೆ ಮಾಡಬೇಕಾಗಿದೆ. ಜಿಲ್ಲಾಡಳಿತ ಆ ಬಗ್ಗೆ ಪರಿಣಾಮಕಾರಿ ಕ್ರಮ ತೆಗೆದುಕೊಂಡಿದೆ. ಅದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ.

ಡ್ರಗ್ಸ್ ಬಳಕೆ, ಮಾರಾಟ, ಸಾಗಾಟ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ ಗೌಪ್ಯತೆ ಕಾಪಾಡಲಾಗುವುದು ಎಂದರು.

ಪೋಷಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆ ಬಗ್ಗೆ ನಿಗಾ ವಹಿಸುವುದು ಅಗತ್ಯ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳ ಎಸ್., ಸಮಾಜದಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಸನಿಗಳಾಗುತ್ತಿದ್ದಾರೆ. ಅವರು ತಮ್ಮ ಕಾರ್ಯಗಳ ಸೋಲು ಮತ್ತು ವೈಫಲ್ಯ ಸಂದರ್ಭಗಳಲ್ಲಿ ದುಶ್ಚಟಕ್ಕೆ ಮಾರುಹೋಗುವ ಸಾಧ್ಯತೆ ಇದೆ. ಅಂಥ ಸಂದರ್ಭದಲ್ಲಿ ಪೋಷಕರು, ಶಿಕ್ಷಕರು, ಸ್ನೇಹಿತರು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಸೂಕ್ತ ಎಂದರು.

10ನೇ ತರಗತಿ ನಂತರದ ವಿದ್ಯಾರ್ಥಿಗಳ ಡ್ರಗ್ಸ್ ಟೆಸ್ಟ್ ಮಾಡಿಸುವುದು ಅವಶ್ಯಕ ಎಂದ ಅವರು, ಮಾದಕ ದ್ರವ್ಯಗಳು ಸುಲಭವಾಗಿ ಸಿಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕುಮಾರಚಂದ್ರ, ಈಚೆಗೆ ಜಿಲ್ಲೆಯಲ್ಲಿ 3 ಕೋಟಿ ಮೌಲ್ಯದ ಜಫ್ತಿಯಾದ ಮಾದಕ ದ್ರವ್ಯ ನಾಶಪಡಿಸಲಾಗಿದೆ. ಅದರಲ್ಲಿ ಹೆಚ್ಚಿನವು ವಿದ್ಯಾರ್ಥಿಗಳಿಂದ ಜಫ್ತಿ ಮಾಡಿದ್ದಾಗಿತ್ತು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ರತ್ನ ಇದ್ದರು.

ದೊಡ್ಡಣಗುಡ್ಡೆ ಬಾಳಿಗ ಆಸ್ಪತ್ರೆ ಮನೋಶಾಸ್ತ್ರಜ್ಞ ಡಾ. ಪಿ. ವಿ. ಭಂಡಾರಿ ಯುವಜನತೆ ಮತ್ತು ಮದ್ಯ ಮಾದಕ ಸೇವನೆ ವಿಷಯ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ಡಿ.ಎನ್.ಎ ಸಂಸ್ಥೆ ವ್ಯವಸ್ಥಾಪಕಿ ರೂಪಲಕ್ಷ್ಮಿ ನಿರೂಪಿಸಿ, ಹಿರಿಯ ನಾಗರಿಕ ಸಹಾಯವಾಣಿ ಸಂಯೋಜಕ ಗಣೇಶ್ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!