Saturday, August 13, 2022
Home ಲೋಕಾಭಿರಾಮ ಆರೋಗ್ಯ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಉಡುಪಿ, ನ. 30 (ಸುದ್ದಿಕಿರಣ ವರದಿ): ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಕರಾವಳಿ ಉಡುಪಿ ಸಹಯೋಗದೊಂದಿಗೆ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಮಂಗಳವಾರ ಇಲ್ಲಿನ ಐಎಂಎ ಭವನದಲ್ಲಿ ಆಯೋಜಿಸಲಾಯಿತು.

ಶಿಬಿರ ಉದ್ಘಾಟಿಸಿದ ಭಾರತೀಯ ವೈದ್ಯಕೀಯ ಸಂಘ ಕರಾವಳಿ ಉಡುಪಿ ಅಧ್ಯಕ್ಷ ಡಾ. ಕಲ್ಯ ವಿನಾಯಕ ಶೆಣೈ, ವೈದ್ಯರು ಮನುಷ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿದರೆ, ಸಮಾಜದ ಆರೋಗ್ಯ ಕಾಪಾಡುವಲ್ಲಿ ಮಾಧ್ಯಮ ಪೂರಕ. ಇವೆರಡೂ ದಿನದ 24 ಗಂಟೆಗಳ ಜನರ ಸೇವೆ ಮಾಡುವ ವೃತ್ತಿಯಾಗಿವೆ. ಸ್ವಾತಂತ್ರ್ಯ ಚಳವಳಿ ಸೇರಿದಂತೆ ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮ ಸಾಕಷ್ಟು ಪ್ರಮುಖ ಪಾತ್ರ ವಹಿಸಿದೆ ಎಂದರು.

ಮಣಿಪಾಲ ಕೆಎಂಸಿ ಹೃದ್ರೋಗ ತಜ್ಞ ಡಾ. ಅಬ್ದುಲ್ ರಝಾಕ್ ಮಾತನಾಡಿ, ರಕ್ತನಾಳದಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ದಿಢೀರನೇ ಬ್ಲಾಕ್ ಆಗುವುದರಿಂದ ಹೃದಯಾಘಾತ ಸಂಭವಿಸುತ್ತದೆ. ಆದ್ದರಿಂದ ಅದನ್ನು ಅತ್ಯಂತ ಶೀಘ್ರವಾಗಿ ಪತ್ತೆಹಚ್ಚಬೇಕು. ಹೃದಯದಲ್ಲಿ ಕಂಡುಬರುವ ರೋಗಗಳನ್ನು ಗ್ಯಾಸ್ಟಿಕ್ ಸಮಸ್ಯೆ ಎಂಬುದಾಗಿ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. ಕಾಲಕಾಲಕ್ಕೆ ಹೃದಯ ಪರೀಕ್ಷೆ ಮಾಡುವುದರಿಂದ ಹೃದಯಾಘಾತ ತಪ್ಪಿಸಬಹುದು ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಪ್ರಧಾನ ಕಾರ್ಯದರ್ಶಿ ಡಾ. ಗಣಪತಿ ಹೆಗಡೆ, ಮಣಿಪಾಲ ಕೆಎಂಸಿ ಮಾರುಕಟ್ಟೆ ವಿಭಾಗದ ಮುಖ್ಯ ವ್ಯವಸ್ಥಾಪಕ ಸಚಿನ್ ಕಾರಂತ, ವ್ಯವಸ್ಥಾಪಕ ಮೋಹನ್ ಶೆಟ್ಟಿ ಅಭ್ಯಾಗತರಾಗಿದ್ದರು.

ಉಡುಪಿ ಪತ್ರಿಕಾ ಭವನ ಸಂಚಾಲಕ ಸುಭಾಶ್ಚಂದ್ರ ವಾಗ್ಳೆ ಇದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತೆ ಪಲ್ಲವಿ ಸಂತೋಷ್ ನಿರೂಪಿಸಿದರು.

ಶಿಬಿರದಲ್ಲಿ ಜನರಲ್ ಮೆಡಿಸಿನ್, ಹೃದಯ, ಚರ್ಮ, ನೇತ್ರ, ಮೂಗು, ಕಿವಿ, ಗಂಟಲು, ಮೂಳೆ, ರಕ್ತದೊತ್ತಡ, ಮಧುಮೇಹ ಹಾಗೂ ಇಸಿಜಿ ಪರೀಕ್ಷೆ ಮಾಡಲಾಯಿತು.

ಶಿಬಿರದಲ್ಲಿ ಜಿಲ್ಲೆಯ ಸುಮಾರು 90 ಮಂದಿ ಪತ್ರಕರ್ತರು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!