ಉಡುಪಿ: ನಾಟಕ, ಪ್ರಭಾವಶಾಲಿ ಅತ್ಯುತ್ತಮ ಮಾಧ್ಯಮವಾಗಿದ್ದು, ಸಮಾಜ ತಪ್ಪುದಾರಿಯಲ್ಲಿ ಸಾಗಿದಾಗ ಅದನ್ನು ತಿದ್ದಿ ಸರಿದಾರಿಗೆ ತರಲು ನಾಟಕ ಪೂರಕ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ ಕುಲಪತಿ ಮತ್ತು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಪ್ರಧಾನ ಧರ್ಮಗುರು ಫಾ| ಸ್ಟ್ಯಾನಿ ಬಿ. ಲೋಬೊ ಅಭಿಪ್ರಾಯ ವ್ಯಕ್ತಪಡಿಸಿದರು.
ನಿರಂತರ ಉದ್ಯಾವರ ಸಂಘಟನೆ ಆಶ್ರಯದಲ್ಲಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ರಂಗ ಮಂದಿರ ವೇದಿಕೆಯಲ್ಲಿ ನಡೆದ ಮೂರನೇ ವರ್ಷದ ತ್ರಿದಿನ ನಾಟಕೋತ್ಸವವನ್ನು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯ ಶ್ಲಾಘನೀಯ ಎಂದರು.
ಅಭ್ಯಾಗತರಾಗಿದ್ದ ಲೇಖಕ ಕಿಶೋರ್ ಗೊನ್ಸಾಲ್ವಿಸ್ ಶುಭ ಹಾರೈಸಿದರು.
ಉದ್ಯಮಿ ಎರಿಕ್ ಡಿ’ಸೋಜಾ ಪೆರಂಪಳ್ಳಿ, ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಸಹಾಯಕ ಧರ್ಮಗುರು ಫಾ| ರೊಲ್ವಿನ್ ಅರಾನ್ಹಾ, 20 ಆಯೋಗಗಳ ಸಂಚಾಲಕ ಗೋಡ್ಫ್ರಿ ಡಿ’ಸೋಜಾ, ನಾಟಕೋತ್ಸವ ಸಂಚಾಲಕ ರೊನಾಲ್ಡ್ ಡಿ’ಸೋಜಾ ಇದ್ದರು.
ಈಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ನಿರಂತರ ಉದ್ಯಾವರ ಸಂಘಟನೆಯ ಜುಡಿತ್ ಪಿರೇರ ಅವರನ್ನು ಸನ್ಮಾನಿಸಲಾಯಿತು.
ನಿರಂತರ ಉದ್ಯಾವರ ಸಂಘಟನೆ ಅಧ್ಯಕ್ಷ ಸ್ಟೀವನ್ ಕೊಲಾಸೊ ಸ್ವಾಗತಿಸಿ, ನಿರ್ದೇಶಕ ರೋಶನ್ ಡಿ’ಸೋಜಾ ವಂದಿಸಿದರು. ಕಾರ್ಯದರ್ಶಿ ಒಲಿವೆರಾ ಮಥಾಯಸ್ ನಿರೂಪಿಸಿದರು.
3 ದಿನಗಳ ನಾಟಕೋತ್ಸವದಲ್ಲಿ ಮಂಗಳೂರಿನ ಅಸ್ತಿತ್ವ ತಂಡದ ಏಕ್ ಪಯ್ಣಾರಿ ಮತ್ತು ಗೀತ್ ಹಾಗೂ ಶಂಕರಪುರ ಕಲಾರಾಧನ ತಂಡದ ಲಿಗೋರಿ ಮಾಸ್ಟರ್ ನಾಟಕ ಪ್ರದರ್ಶನಗೊಳ್ಳಲಿವೆ