Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಕನ್ನಡ ರಾಜ್ಯೋತ್ಸವ: ವಿಶೇಷ ಅಂಚೆಚೀಟಿ ಪ್ರದರ್ಶನ

ಕನ್ನಡ ರಾಜ್ಯೋತ್ಸವ: ವಿಶೇಷ ಅಂಚೆಚೀಟಿ ಪ್ರದರ್ಶನ

ಕನ್ನಡ ರಾಜ್ಯೋತ್ಸವ: ವಿಶೇಷ ಅಂಚೆಚೀಟಿ ಪ್ರದರ್ಶನ
(ಸುದ್ದಿಕಿರಣ ವರದಿ)

ಉಡುಪಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಕನ್ನಡ ರಾಜ್ಯೋತ್ಸವ ವಿಶೇಷ ಅಂಚೆಚೀಟಿಗಳ ಪ್ರದರ್ಶನ ನಡೆಯಿತು.

ಸುಮಾರು ನಾಲ್ಕು ದಶಕಗಳಿಂದ ಅಂಚೆಚೀಟಿ ಹಾಗೂ ನೋಟು- ನಾಣ್ಯ ಸಂಗ್ರಹ ಮಾಡುತ್ತಿರುವ ಕಲ್ಯಾಣಪುರ ಲಕ್ಷ್ಮೀನಾರಾಯಣ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಅಂಚೆಚೀಟಿ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಉಡುಪಿ ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ನಝೀರ್ ಪೊಲ್ಯ ಮತ್ತು ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಸ್ವಚ್ಛ ಭಾರತ್ ಫ್ರೆಂಡ್ಸ್ ನ ಹಿರಿಯ ಸದಸ್ಯರಾದ ಜಗದೀಶ್ ಶೆಟ್ಟಿ, ವೀಕ್ಷಿತ್, ರಾಘವೇಂದ್ರ ಪ್ರಭು ಕರ್ವಾಲು ಮತ್ತು ನಾಗರಾಜ್ ಕಿದಿಯೂರು ಇದ್ದರು.

ಸ್ವಚ್ಛ ಭಾರತ್ ಫ್ರೆಂಡ್ಸ್ ಸದಸ್ಯ ಗಣೇಶ್ ಪ್ರಸಾದ್ ಸ್ವಾಗತಿಸಿ, ನಿರೂಪಿಸಿದರು.

28 ಸಾವಿರ ಅಂಚೆಚೀಟಿ ಸಂಗ್ರಹ
ಪ್ರಸ್ತುತ ಮಣಿಪಾಲ ಎಂಐಟಿ ಉದ್ಯೋಗಿಯಾಗಿರುವ ಲಕ್ಷ್ಮೀನಾರಾಯಣ ನಾಯಕ್, ಕಳೆದ ಸುಮಾರು 40 ವರ್ಷದಿಂದ ಅಂಚೆಚೀಟಿ ಸಂಗ್ರಹದಲ್ಲಿ ತೊಡಗಿದ್ದಾರೆ.

ಅವರ ಬಳಿ 180 ದೇಶಗಳ ಸುಮಾರು 28 ಸಾವಿರ ಅಂಚೆಚೀಟಿಗಳಿವೆ. ಜೊತೆಗೆ 160 ದೇಶಗಳ ಸುಮಾರು 20 ಸಾವಿರಕ್ಕೂ ಅಧಿಕ ನಾಣ್ಯಗಳು ಹಾಗೂ ನೋಟುಗಳಿವೆ ಎಂದು ನಾಯಕ್ ತಿಳಿಸಿದರು.

ಪಠ್ಯವೇ ಸ್ಪೂರ್ತಿ
ಅಂಚೆಚೀಟಿಯಲ್ಲಿ ದೇಶದ ಶ್ರೀಮಂತ ಇತಿಹಾಸ ಅಡಗಿದೆ. ಅಂಚೆಚೀಟಿ ಸಂಗ್ರಹವೆಂದರೆ ಅದೊಂದು ಸಮಗ್ರ ಅಧ್ಯಯನ ಮಾಡಿದಂತೆ. ವಿವಿಧ ದೇಶಗಳ ಅಂಚೆಚೀಟಿ, ನಾಣ್ಯ, ನೋಟುಗಳನ್ನು ಸಂಗ್ರಹ ಮಾಡುತ್ತಿದ್ದೇನೆ ಎಂದ ನಾಯಕ್, ತನ್ನೀ ಹವ್ಯಾಸಕ್ಕೆ ಬಾಲ್ಯದ ದಿನಗಳಲ್ಲಿ ಶಾಲೆಯಲ್ಲಿ ಕಲಿತ ಅಂಚೆಚೀಟಿ ಸಂಗ್ರಹ ಎಂಬ ಪಠ್ಯವೇ ಸ್ಪೂರ್ತಿ.

ಅಂದು ತನಗೆ ಶಿಕ್ಷಕರಾಗಿದ್ದ ಶ್ರೀಪತಿ ಅವಧಾನಿ ಎಂಬವರು ತನಗೆ ಅಂಚೆಚೀಟಿ ಸಂಗ್ರಹಿಸಲು ಪ್ರೋತ್ಸಾಹ ನೀಡಿದರು. ಬಾಲ್ಯದ ದಿನಗಳಲ್ಲಿ ಅಂಚೆ ಕಚೇರಿ, ಪೋಸ್ಟ್ ಮನ್ ಸೇರಿದಂತೆ ಅವರಿವರಲ್ಲಿ ಕೇಳಿ, ಕಾಡಿ ಬೇಡಿ ಅಂಚೆಚೀಟಿ ಸಂಗ್ರಹಿಸುತ್ತಿದ್ದೆ ಎಂದು ನೆನಪಿನ ಬುತ್ತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಾಯಕ್, ಅಂಚೆಚೀಟಿ ಸಂಗ್ರಹದ ತನ್ನ ಹವ್ಯಾಸ ಬೆಳೆಯುತ್ತಾ ಬೆಳೆಯುತ್ತಾ ಇದೀಗ ತನ್ನ ಬಳಿ ಅಗಾಧ ಸಂಗ್ರಹವಿದೆ ಎಂದು ತನ್ನ ಹವ್ಯಾಸ ಬೆಳೆದುಬಂದ ಪರಿಯನ್ನು ವಿವರಿಸಿದರು.

ವೈವಿಧ್ಯಮಯ ಸಂಗ್ರಹ
ತನ್ನ ಬಳಿ ಅಂಚೆ ಇಲಾಖೆ ಮುದ್ರಿಸಿದ ಸುಮಾರು 95 ಬಗೆಯ ಅಂಚೆಚೀಟಿಗಳ ಪೈಕಿ 75ರಷ್ಟು ಸಂಗ್ರಹವಿದೆ.

ನಾಡಿನ ಮಹಾಪುರುಷರು, ದಾರ್ಶನಿಕರು, ಸಾಧಕರು, ಸಂಗೀತ ಸಾಹಿತ್ಯಾದಿ ಕಲಾವಿದರು, ಪ್ರೇಕ್ಷಣೀಯ ಸ್ಥಳಗಳು, ಐತಿಹಾಸಿಕ ತಾಣಗಳು…. ಹೀಗೆ ವೈವಿಧ್ಯಮಯ ಅಂಚೆಚೀಟಿಗಳ ಸಂಗ್ರಹವಿದೆ.

ಉಡುಪಿ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಶಂಕರಪುರ ಮಲ್ಲಿಗೆ, ಕವಿ ಮುದ್ದಣ್ಣ, ಪ್ರಾಚೀನ ಶೈಕ್ಷಣಿಕ ಸಂಸ್ಥೆ, ಧಾರ್ಮಿಕ ಕೇಂದ್ರಗಳ ಅಂಚೆಚೀಟಿಗಳು ಇತ್ಯಾದಿಗಳನ್ನೊಳಗೊಂಡ ಸಮಗ್ರ ಕರ್ನಾಟಕದ ಅಪೂರ್ವ ಅಂಚೆಚೀಟಿಗಳಿವೆ ಎಂದರು.

ಯುವಜನತೆ ಇಂಥ ಹವ್ಯಾಸಗಳನ್ನು ಬೆಳೆಸಿಕೊಂಡಲಲಿ ವ್ಯಕ್ತಿತ್ವ ವಿಕಸನದ ಜೊತೆಗೆ ನಮ್ಮ ಸಂಸ್ಕೃತಿಯ ತಲಸ್ಪರ್ಶಿ ಅಧ್ಯಯನ ಸಾಧ್ಯ ಎಂದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!