Monday, August 15, 2022
Home ಲೋಕಾಭಿರಾಮ ಆರೋಗ್ಯ ಜುಲೈ 18ರಿಂದ ಮುನ್ನೆಚ್ಚರಿಕೆ ಡೋಸ್ ಲಸಿಕೆ

ಜುಲೈ 18ರಿಂದ ಮುನ್ನೆಚ್ಚರಿಕೆ ಡೋಸ್ ಲಸಿಕೆ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ಜುಲೈ 18ರಿಂದ ಮುನ್ನೆಚ್ಚರಿಕೆ ಡೋಸ್ ಲಸಿಕೆ
ಉಡುಪಿ: ಸಂಭವನೀಯ ಕೋವಿಡ್ ನಾಲ್ಕನೇ ಅಲೆಯಿಂದ ಸಂಭವಿಸಬಹುದಾದ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ 18ರಿಂದ 59 ವರ್ಷ ವಯೋಮಾನದವರಿಗೆ ಮುನ್ನೆಚ್ಚರಿಕೆ ಕೋವಿಡ್ ಲಸಿಕೆ ನೀಡಲುದ್ದೇಶಿಸಿದ್ದು, ಜುಲೈ 18ರಿಂದ ಆರಂಭಗೊಳ್ಳಲಿದೆ.

ಪ್ರಸ್ತುತ ಜಿಲ್ಲೆಯಲ್ಲಿ 8 ಲಕ್ಷ ಮಂದಿ ಫಲಾನುಭವಿಗಳಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ 18ರಿಂದ 59 ವರ್ಷ ವಯೋಮಾನದ ಎಲ್ಲಾ ಸಾರ್ವಜನಿಕರಿಗೆ ಸೆಪ್ಟೆಂಬರ್ 30ರ ವರೆಗೆ ಉಚಿತ ಮುನ್ನೆಚ್ಚರಿಕೆ ಡೋಸ್ ನೀಡಲುದ್ದೇಶಿಸಲಾಗಿದೆ.

ಗುರಿ ಮೀರಿದ ಸಾಧನೆ
ಜಿಲ್ಲೆಯಲ್ಲಿ 2021ರ ಜನವರಿ 16ರಂದು ಕೋವಿಡ್ ಲಸಿಕೆ ನೀಡಿಕೆ ಆರಂಭಗೊಂಡಿದ್ದು ಮೊದಲಿಗೆ ಆರೋಗ್ಯ ಕಾರ್ಯಕರ್ತರು ಹಾಗೂ ಭಾರತ ಸರಕಾರ ಗುರುತಿಸಿದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು.

ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟ ಸಾರ್ವಜನಿಕರು ಮತ್ತು ರಾಜ್ಯ ಸರಕಾರದಿಂದ ಗುರುತಿಸಲ್ಪಟ್ಟ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಜೂನ್ 21ರಿಂದ 18 ವರ್ಷ ಪೂರೈಸಿದ ಎಲ್ಲಾ ಸಾರ್ವಜನಿಕರಿಗೆ ಲಸಿಕೆ ನೀಡಲಾಯಿತು.

ಈಗಾಗಲೇ 18 ವರ್ಷ ಮೇಲ್ಪಟ್ಟ 10,04,712 ಮಂದಿ ಫಲಾನುಭವಿಗಳು ಮೊದಲನೇ ಡೋಸ್ ಲಸಿಕೆ ಪಡೆದು 100.57 ಶೇ. ಹಾಗೂ 10,00,092 ಮಂದಿ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದು 100.11 ಶೇ. ಸಾಧನೆ ಆಗಿದೆ.

18 ವರ್ಷ ಮೇಲ್ಪಟ್ಟ, 2ನೇ ಡೋಸ್ ಲಸಿಕೆ ಪಡೆದು 6 ತಿಂಗಳು ದಾಟಿದ ಸಾರ್ವಜನಿಕರು ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳ ಲಸಿಕೆ ಕೇಂದ್ರಕ್ಕೆ ಹೋಗಿ ಉಚಿತವಾಗಿ ಲಸಿಕೆ ಪಡೆದು ಸ್ವಾತಂತ್ರ್ಯದ ಅಮೃತ ಮಹೋತ್ಸದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

ವಿದೇಶಕ್ಕೆ ತೆರಳುವ 18 ವರ್ಷ ಮೇಲ್ಪಟ್ಟ ಫಲಾನುಭವಿಗಳು ಎರಡನೇ ಡೋಸ್ ಪಡೆದು 3 ತಿಂಗಳು ದಾಟಿದಲ್ಲಿ ಮುಂಜಾಗ್ರತೆ ಡೋಸ್ ಲಸಿಕೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಸೆಪ್ಟಂಬರ್ 30ರೊಳಗೆ 18ರಿಂದ 59 ವರ್ಷ ವರೆಗಿನ ಎಲ್ಲರಿಗೂ ಕೋವಿಡ್ 19 ಮುನ್ನೆಚ್ಚರಿಕೆ ಲಸಿಕೆ ನೀಡಲು ಪ್ರಾರಂಭದ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ ಎಲ್ಲಾ ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದು, ಮುಂದಿನ ದಿನದಲ್ಲಿ ಗ್ರಾಮ ಪಂಚಾಯತ್ ಗಳ ಸಹಯೋಗದಲ್ಲಿ ಗ್ರಾಮೀಣ ಪ್ರದೇಶ ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕಾರ್ಯನಿರ್ವಹಿಸುವ ವಿವಿಧ ಖಾಸಗಿ ಸಂಸ್ಥೆಗಳಲ್ಲೂ ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳ ಮೂಲಕ ಮುನ್ನೆಚ್ಚರಿಕೆ ಡೋಸ್ ನೀಡುವ ಮೂಲಕ ನಿಗದಿತ ಅವಧಿಯೊಳಗೆ ಮುನ್ನೆಚ್ಚರಿಕೆ ಲಸಿಕೆ ನೀಡುವಲ್ಲಿ ಸಂಪೂರ್ಣ ಗುರಿ ಸಾಧಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.

ಮುನ್ನೆಚ್ಚರಿಕೆ ಡೋಸ್ ನೀಡುವ ಕಾರ್ಯದಲ್ಲಿ ನಿಗದಿತ ಗುರಿ ಸಾಧಿಸಲು ಪೂರಕವಾಗಿ ವರ್ತಿಸುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!