Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್: ನಿರಂತರ 12 ವರ್ಷದಿಂದ ಶೇ. 18 ಡಿವಿಡೆಂಡ್ ಘೋಷಣೆ

ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್: ನಿರಂತರ 12 ವರ್ಷದಿಂದ ಶೇ. 18 ಡಿವಿಡೆಂಡ್ ಘೋಷಣೆ

ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್: ನಿರಂತರ 12 ವರ್ಷದಿಂದ ಶೇ. 18 ಡಿವಿಡೆಂಡ್ ಘೋಷಣೆ

ಉಡುಪಿ, ನ. 1 (ಸುದ್ದಿಕಿರಣ ವರದಿ): ಇಲ್ಲಿನ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ 2020- 21ನೇ ಆರ್ಥಿಕ ಸಾಲಿನ 43ನೇ ವಾರ್ಷಿಕ ಮಹಾಸಭೆ ಸೋಮವಾರ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಎ ಸುವರ್ಣ ಅಧ್ಯಕ್ಷತೆಯಲ್ಲಿ ನಗರದ ಪುರಭವನದಲ್ಲಿ ನಡೆಯಿತು.

ಗ್ರಾಹಕ ಸ್ನೇಹಿ ಬ್ಯಾಂಕ್
ಸರ್ವ ಸದಸ್ಯರನ್ನು ಸ್ವಾಗತಿಸಿದ ಯಶಪಾಲ್ ಸುವರ್ಣ, ನಿರಂತರ 12 ವರ್ಷದಿಂದ ಶೇ. 18 ಡಿವಿಡೆಂಡ್ ಘೋಷಣೆ ಮೂಲಕ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬ್ಯಾಂಕು ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ. ವಿಶೇಷವಾಗಿ ಮೀನುಗಾರರು ಮತ್ತು ಕೃಷಿಕರಿಗೆ ಸರಕಾರದ ವಿವಿಧ ಯೋಜನೆಗಳಾದ ಶೂನ್ಯ ಬಡ್ಡಿ ದರದ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಬ್ಸಿಡಿಯನ್ನು ಬ್ಯಾಂಕಿನ ಗ್ರಾಹಕರ ಖಾತೆಗೆ ಜಮೆಯಾಗುವಂತೆ ಮಾಡಲು ಕಾರ್ಯಪ್ರವೃತ್ತವಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸುವ ಯೋಜನೆ ಪ್ರಗತಿಯಲ್ಲಿದೆ ಎಂದರು.

ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. 5 ಲಕ್ಷದ ವರೆಗೆ ಸಾಲ ಹಾಗೂ ಕೋವಿಡ್ 19 ಸಂದರ್ಭದಲ್ಲಿ ಸಣ್ಣ ಉದ್ದಿಮೆದಾರರು ಹಾಗೂ ಮೀನುಗಾರರಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಕೋವಿಡ್ ಎಕ್ಸ್ ಪ್ರೆಸ್ ಸಾಲ ಮತ್ತು ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ ಮೂಲಕ ಸಾಲ ನೀಡಿ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗಿದ್ದು, ವಿದ್ಯಾರ್ಥಿಗಳಿಗಾಗಿ ಶೂನ್ಯ ಬ್ಯಾಲೆನ್ಸ್ ಮಹಾಲಕ್ಷ್ಮೀ ವಿದ್ಯಾ ಸಿರಿ ಉಳಿತಾಯ ಖಾತೆಯ ಸೌಲಭ್ಯ ಒದಗಿಸಲಾಗಿದೆ ಎಂದರು.

ರಾಜ್ಯವ್ಯಾಪಿ ವಿಸ್ತರಣೆಗೆ ಯೋಜನೆ
ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಿಗೆ ವಿಸ್ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಬ್ಯಾಂಕಿನ ಕಾರ್ಯಕ್ಷೇತ್ರ ವಿಸ್ತರಿಸುವ ಬಗ್ಗೆ ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಿರುವುದಾಗಿ ತಿಳಿಸಿದರು.

ವರದಿ ವರ್ಷದಲ್ಲಿ ಆದಾಯ ತೆರಿಗೆ ಹಾಗೂ ನಿಯಮದಂತೆ ಇತರ ಸಲುವಳಿಗಳಿಗೆ ಅನುವು ಮಾಡುವ ಮೊದಲು ರೂ. 5.59 ಕೋಟಿ ಲಾಭ ಗಳಿಸಿದ್ದು ಹಾಗೂ ಅನುವು ಮಾಡಿದ ನಂತರ ರೂ. 1.75 ಕೋಟಿ ನಿವ್ವಳ ಲಾಭ ಗಳಿಸಿದ್ದು, 2020- 21ರ ವರ್ಷಾಂತ್ಯಕ್ಕೆ ಬ್ಯಾಂಕಿನ ಠೇವಣಿ 243 ಕೋ. ರೂ. ಹಾಗೂ ಸಾಲ ಮತ್ತು ಮುಂಗಡ 177 ಕೋ. ರೂ. ತಲುಪಿದ್ದು, ಬ್ಯಾಂಕಿನ ಒಟ್ಟು ವಹಿವಾಟು 4,491.57 ಕೋಟಿ, ದುಡಿಯುವ ಬಂಡವಾಳ 28,112.04 ಲಕ್ಷಕ್ಕೆ ಏರಿಕೆಯಾಗಿದ್ದು ಸಂಪನ್ಮೂಲ ನಿರ್ವಹಣೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವುದನ್ನು ವಿವರಿಸಿದರು.

ಶಾಸನಬದ್ಧ ಲೆಕ್ಕಪರಿಶೋಧಕರು ಬ್ಯಾಂಕನ್ನು ‘ಎ’ ದರ್ಜೆಯಲ್ಲಿ ವರ್ಗೀಕರಿಸಿದ್ದು, ಬ್ಯಾಂಕಿನ ಸದಸ್ಯರಿಗೆ ಶೇ. 18 ಡಿವಿಡೆಂಡ್ ನ್ನು ಸರ್ವಾನುಮತದಿಂದ ಘೋಷಿಸಿದ್ದು, ಅದರಲ್ಲಿ ಶೇ. 3ನ್ನು ಸಮಾಜ ಕಲ್ಯಾಣ ನಿಧಿಗೆ ವಿನಿಯೋಗಿಸುವಂತೆ ಸದಸ್ಯರಿಂದ ಬಂದ ಸಲಹೆಯನ್ನು ಸಭೆಯ ಮುಂದಿರಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದವರಿಗೆ ಹಾಗೂ ಮಹಾಸಭೆಯಲ್ಲಿ ವ್ಯಕ್ತವಾದ ಅಭಿವೃದ್ಧಿ ಪರ ಸಲಹೆ ಸೂಚನೆಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂಬರುವ ವರ್ಷದಲ್ಲಿಯೂ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಅಧ್ಯಕ್ಷ ಯಶಪಾಲ್ ಕೋರಿದರು.

ಬ್ಯಾಂಕಿನ ನಿರಂತರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬ್ಯಾಂಕಿನ ಸಾಧನೆ ಬಗ್ಗೆ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿ, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಅಭಿನಂದನೆ
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ನೂತನ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಪ್ರಥಮ ಎಸ್. ಸಾಲ್ಯಾನ್ ಮತ್ತು ಡಾ| ಸಫಿಯಾನ್ ಇಬ್ರಾಹಿಂ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರಾದ ವೆಂಕಟರಮಣ ಕಿದಿಯೂರು, ವಾಸುದೇವ ಸಾಲ್ಯಾನ್, ಶಶಿಕಾಂತ ಬಿ. ಕೋಟ್ಯಾನ್, ಹೇಮನಾಥ ಜೆ. ಪುತ್ರನ್, ಶೋಭೇಂದ್ರ ಸಸಿಹಿತ್ಲು, ಕೆ. ಸಂಜೀವ ಶ್ರೀಯಾನ್, ರಾಮ ನಾಯ್ಕ್ ಎಚ್, ವಿನಯ ಕರ್ಕೇರ, ನಾರಾಯಣ ಟಿ. ಅಮೀನ್, ಸುರೇಶ್ ಬಿ. ಕರ್ಕೇರ, ಬಿ. ಬಿ. ಕಾಂಚನ್, ಶಿವರಾಮ ಕುಂದರ್, ವನಜಾ ಎಚ್. ಕಿದಿಯೂರು ಮತ್ತು ವನಜಾ ಜೆ ಪುತ್ರನ್, ವೃತ್ತಿಪರ ನಿರ್ದೇಶಕ ಮಂಜುನಾಥ ಎಸ್. ಕೆ., ಬ್ಯಾಂಕಿಂಗ್ ಸಲಹೆಗಾರ ಆನಂದ ಎನ್. ಪುತ್ರನ್ ಹಾಗೂ ಪ್ರಧಾನ ವ್ಯವಸ್ಥಾಪಕ ಜಿ. ಕ.ೆ ಶೀನ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!