Sunday, July 3, 2022
Home ಲೋಕಾಭಿರಾಮ ಆರಂಬ ಕೃಷಿಯನ್ನು ಲಾಭದಾಯಕವಾಗಿಸಲು ವಿವಿಧ ಯೋಜನೆ

ಕೃಷಿಯನ್ನು ಲಾಭದಾಯಕವಾಗಿಸಲು ವಿವಿಧ ಯೋಜನೆ

ಕೃಷಿಯನ್ನು ಲಾಭದಾಯಕವಾಗಿಸಲು ವಿವಿಧ ಯೋಜನೆ

(ಸುದ್ದಿಕಿರಣ ವರದಿ)
ಉಡುಪಿ: ಕೃಷಿ ಲಾಭದಾಯಕವಲ್ಲ ಎಂಬ ಕಾರಣದಿಂದ ಹಲವು ಮಂದಿ ರೈತರು ತಮ್ಮ ಭೂಮಿಯನ್ನು ಹಡಿಲು ಬಿಡುತ್ತಿದ್ದು, ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಲು ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಈ ಯೋಜನೆಗಳ ಪ್ರಯೋಜನ ಪಡೆಯುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಗುರುವಾರ ಕಡೆಕಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ಹಡಿಲು ಭೂಮಿ ಕೃಷಿ ಗದ್ದೆಗಳಲ್ಲಿ ಕಳೆ ತೆಗೆಯುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.

ಸಣ್ಣ ಮತ್ತು ಮಧ್ಯಮ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖರಾಗದಂತೆ ತಡೆಯಲು ಪ್ರಧಾನಮಂತ್ರಿ ಯಂತ್ರೋಪಕರಣ ಬಾಡಿಗೆ ಕೇಂದ್ರ, ಕೃಷಿ ಸಿಂಚಾಯಿ ಯೋಜನೆ ಮೂಲಕ ಹನಿ ನೀರಾವರಿ ಉತ್ತೇಜನ, ರಸಗೊಬ್ಬರ ಗುಣಮಟ್ಟದ ಏರಿಕೆ, ಪರಂಪರಾಗತ ಕೃಷಿ ಯೋಜನೆಗೆ ಹೆಚ್ಚಿನ ಆದ್ಯತೆ, ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ. ವಿದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆದ ಸಾವಯವ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನಮ್ಮಲ್ಲಿ ಬೆಳೆದ ಆಹಾರ ಧಾನ್ಯಗಳನ್ನು ವಿದೇಶಕ್ಕೆ ರಫ್ತು ಮಾಡುವುದರಿಂದ ರೈತರೂ ಹೆಚ್ಚಿನ ಲಾಭ ಪಡೆಯಬಹುದು ಎಂದರು.

ಸಣ್ಣ ಕೃಷಿಕರು, ಭೂಮಿಯ ಒಡೆತನ ಹೊಂದಿರುವ ಕೃಷಿಕರೆಲ್ಲರಿಗೂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರಧಾನಿ ಮೋದಿ ವರ್ಷಕ್ಕೆ 6 ಸಾವಿರ ರೂ. ನೇರವಾಗಿ ಕೃಷಿಕರ ಖಾತೆಗೆ ಹಾಕುತ್ತಿದ್ದಾರೆ. ಅದನ್ನು ಕೃಷಿಯ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಕೃಷಿ ಉತ್ಪಾದಕರ ಸಂಘಗಳನ್ನು ಆರಂಭಿಸುವಂತೆ ತಿಳಿಸಿದ ಅವರು, ರೈತರ ಆದಾಯ ದ್ವಿಗುಣಗೊಳಿಸಲು ಕೆಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಯೋಜನೆಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಆ್ಯಪ್ ಬಳಕೆ ವಿಧಾನ ಮತ್ತು ಅದರ ಪ್ರಯೋಜನ ಕುರಿತು ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಸಹಾಯಕ ನಿರ್ದೇಶಕ ಮೋಹನರಾಜ್, ಕೃಷಿ ಇಲಾಖೆ ಹಾಗೂ ಬ್ರಹ್ಮಾವರ ಕೃಷಿ ಕೇಂದ್ರದ ಅಧಿಕಾರಿಗಳು, ಪಕ್ಷ ಪ್ರಮುಖರು ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!