Sunday, July 3, 2022
Home ಲೋಕಾಭಿರಾಮ ಆರಂಬ ಪಡಿಲು ಭೂಮಿಯಲ್ಲಿ ಕೃಷಿ: ಕೇದಾರೋತ್ಥಾನ ಯೋಜನೆ

ಪಡಿಲು ಭೂಮಿಯಲ್ಲಿ ಕೃಷಿ: ಕೇದಾರೋತ್ಥಾನ ಯೋಜನೆ

ಉಡುಪಿ: ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ, ಅಂತರ್ಜಲ ವೃದ್ಧಿ ಹಾಗೂ ಹಸಿರೀಕರಣದ ಆಶಯದೊಂದಿಗೆ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಡಿಲು ಭೂಮಿ (ಪಾಳುಭೂಮಿ)ಯಲ್ಲಿ ಕೃಷಿಯನ್ನು ಉತ್ತೇಜಿಸುವ ಕೇದಾರೋತ್ಥಾನ ಯೋಜನೆಯನ್ನು ಕ್ಷೇತ್ರದಲ್ಲಿ ಜಾರಿಗೊಳಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಯೋಜನೆಯ ಮಾಹಿತಿ ನೀಡಿದ ಅವರು, ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪಾಳುಬಿದ್ದಿರುವ ಕೃಷಿಭೂಮಿ ಪೈಕಿ ಪ್ರಸ್ತುತ ಸುಮಾರು 2 ಸಾವಿರ ಎಕರೆ ಭೂಮಿಯಲ್ಲಿ ಭತ್ತದ ಕೃಷಿ ಕೈಗೊಳ್ಳಲಾಗುವುದು. ಪಾಳುಭೂಮಿಯನ್ನು ದಾನಿಗಳ ನೆರವಿನಿಂದ ಕೃಷಿಯೋಗ್ಯ ಭೂಮಿಯನ್ನಾಗಿಸಿ ರೈತರಿಗೇ ಬೆಳೆ ಬೆಳೆಯಲು ಪ್ರಥಮ ಆದ್ಯತೆ ನೀಡಲಾಗುವುದು. ಅದು ಅಸಾಧ್ಯವಾದಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಕೃಷಿ ಕಾರ್ಯ ಕೈಗೊಂಡು ಮುಂದಿನ ಎರಡು- ಮೂರು ವರ್ಷದಲ್ಲಿ ಅವರಿಗೆ ಉತ್ತೇಜನ ನೀಡಲಾಗುವುದು. ಒಟ್ಟಿನಲ್ಲಿ ರೈತರನ್ನು ಕೃಷಿಯತ್ತ ಒಲವು ಮೂಡಿಸುವುದು ಯೋಜನೆಯ ಆಶಯ ಎಂದರು.
ನಗರಸಭೆಯ 35 ವಾರ್ಡುಗಳು ಮತ್ತು 19 ಗ್ರಾ. ಪಂ. ಸೇರಿದಂತೆ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಾಳುಭೂಮಿಯನ್ನು ಯೋಜನೆಯ ವ್ಯಾಪ್ತಿಗೊಳಿಸಲಾಗುವುದು. ಈ ಯೋಜನೆ ನಿರಂತರವಾಗಿ ನಡೆಯಬೇಕೆಂಬ ಉದ್ದೇಶದಿಂದ ಉಡುಪಿ ಶಾಸಕರು ಅಧ್ಯಕ್ಷರು ಹಾಗೂ ಎಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ವಿವಿಧ ಜನಪ್ರತಿನಿಧಿಗಳು ಹಾಗೂ ತಜ್ಞರನ್ನೊಳಗೊಂಡ 57 ಮಂದಿಯ ಧರ್ಮ, ರಾಜಕೀಯೇತರ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.
ಬ್ರಹ್ಮಾವರ ಕೃಷಿ ಸಂಶೋಧನ ಕೇಂದ್ರ, ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಯಾಂತ್ರೀಕೃತ ಕೃಷಿಗೆ ಆದ್ಯತೆ ನೀಡಿ, ಮಾನವ ಶ್ರಮಕ್ಕೂ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ 6 ಯಂತ್ರ ಸಹಾಯಕ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಲಾಕ್ ಡೌನ್ ಜಾರಿಯಲ್ಲಿದ್ದರೂ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ಇದೆ. ಇದೀಗ ಬೆಂಗಳೂರು ಮೊದಲಾದೆಡೆಗಳಿಂದ ಊರಿಗೆ ಮರಳಿರುವವರು ಕೃಷಿ ಕಾಯಕದಲ್ಲಿ ತೊಡಗಬಹುದು ಎಂದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಪದಾಧಿಕಾರಿಗಳಾದ ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿ. ಪಂ. ಸದಸ್ಯ ಮಾರಾಳಿ ಪ್ರತಾಪ ಹೆಗ್ಡೆ, ಮಹೇಶ ಠಾಕೂರ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!