Thursday, July 7, 2022
Home ಲೋಕಾಭಿರಾಮ ಆರಂಬ ರಾಜ್ಯದಲ್ಲಿ ಪಾಳುಬಿದ್ದಿರುವ 15 ಲಕ್ಷ ಹೆಕ್ಟೇರು ಕೃಷಿ ಭೂಮಿ

ರಾಜ್ಯದಲ್ಲಿ ಪಾಳುಬಿದ್ದಿರುವ 15 ಲಕ್ಷ ಹೆಕ್ಟೇರು ಕೃಷಿ ಭೂಮಿ

ಉಡುಪಿ: ರಾಜ್ಯದಲ್ಲಿ ಸುಮಾರು 15 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಬೇಸಾಯ ಮಾಡದೆ ಹಡಿಲು (ಪಾಳು) ಬಿದ್ದಿದೆ. ಭೂಮಿಯನ್ನು ಹಡಿಲು ಬಿಡುವುದು ರಾಷ್ಟ್ರದ್ರೋಹ. ಭೂಮಿತಾಯಿಯನ್ನು ಬಂಜೆಯನ್ನಾಗಿಸಿದ ಮಹಾಪಾಪ ಕಾರ್ಯಕ್ಕೆ ಗುರಿಯಾಗುತ್ತೇವೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಎಚ್ಚರಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ 2 ಸಾವಿರ ಎಕರೆ ಹಡಿಲು ಪ್ರದೇಶದಲ್ಲಿ ನಡೆಯುತ್ತಿರುವ ಬೇಸಾಯದ ಕೃಷಿ ನಾಟಿ ಕಾರ್ಯಕ್ಕೆ ಶನಿವಾರ ಕಡೆಕಾರು ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದರು.

ಕೃಷಿ ಯೋಗ್ಯ ಭೂಮಿಯಲ್ಲಿ ಬೇಸಾಯ ಮಾಡದೇ ಬಿಟ್ಟಲ್ಲಿ ಆಹಾರೋತ್ಪಾದನೆ ಕುಂಠಿತವಾಗಲಿದೆ. ಸರಕಾರಕ್ಕೆ ಆದಾಯವೂ ನಷ್ಟವಾಗಲಿದೆ ಎಂದ ಸಚಿವ ಪಾಟೀಲ್, ದೇಶದಲ್ಲಿ ಶೇ. 60ರಷ್ಟು ಉದ್ಯೋಗ ಕೃಷಿಯಿಂದ ಲಭಿಸುತ್ತಿದೆ. ಶೇ. 20ರಷ್ಟು ಜಿ.ಎಸ್.ಟಿ. ಆದಾಯ ಸರಕಾರಕ್ಕೆ ಬರುತ್ತದೆ. ಕಳೆದ ವರ್ಷ ರಾಜ್ಯದಲ್ಲಿ 153 ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿದ್ದು, ಶೇ. 10ರಷ್ಟು ಉತ್ಪಾದನೆ ಜಾಸ್ತಿಯಾಗಿದೆ ಎಂದರು.
ಉಡುಪಿಯಲ್ಲಿ ಹಮ್ಮಿಕೊಂಡ ಹಡಿಲು ಭೂಮಿ ಕೃಷಿ ಅಂದೋಲನ ರಾಷ್ಟ್ರಕ್ಕೇ ಮಾದರಿ ಎಂದು ಪಾಟೀಲ್ ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಸಚಿವ ಬಿ. ಸಿ. ಪಾಟೀಲ್ ಗದ್ದೆಗಿಳಿದು ಸ್ವತಃ ನೇಜಿ ನೆಟ್ಟರು. ರೈತನಂತೆ ಧೋತಿ ತೊಟ್ಟು ತಲೆಗೆ ಮುಟ್ಟಾಳೆ (ಹಾಳೆ ಟೋಪಿ) ಧರಿಸಿದ್ದ ಪಾಟೀಲ್ ಸ್ವತಃ ಟ್ರಾಕ್ಟರ್ ಚಲಾಯಿಸಿದರು. ಶಾಸಕ ರಘುಪತಿ ಭಟ್ ಸಾಥ್ ನೀಡಿದರು.

ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ದಾ. ಮಾ. ರವೀಂದ್ರ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಉದ್ಯಮಿ ಭುವನೇಂದ್ರ ಕಿದಿಯೂರು, ರಿಕೇಶ್, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ಮಹೇಶ್ ಠಾಕೂರ್, ದಿನಕರಬಾಬು ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಉಪನಿರ್ದೇಶಕ ಸೂರ್ಯಕಾಂತ ಬಿರಾದರ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಮುಖ್ಯಸ್ಥ ಡಾ| ಬಿ. ಧನಂಜಯ್, ಸಂಶೋಧನಾ ನಿರ್ದೇಶಕ ಲಕ್ಷ್ಮಣ್, ಸಹಾಯಕ ನಿರ್ದೇಶಕ ಮೋಹನ್ ರಾಜ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!