Thursday, July 7, 2022
Home ಲೋಕಾಭಿರಾಮ ಆರಂಬ ಹಡಿಲು ಕೃಷಿ ಭೂಮಿ ಗುರುತಿಸಲು ಕರೆ

ಹಡಿಲು ಕೃಷಿ ಭೂಮಿ ಗುರುತಿಸಲು ಕರೆ

ಉಡುಪಿ: ನಗರಸಭೆಯ ಪ್ರತೀ ವಾರ್ಡಿನಲ್ಲಿ ನಗರಸಭೆ ಸದಸ್ಯರು ಹಾಗೂ ಪ್ರತೀ ಗ್ರಾಮ ಪಂಚಾಯತ್ ನಲ್ಲಿ ಜನಪ್ರತಿನಿಧಿಗಳು ಹಡಿಲು ಕೃಷಿ ಭೂಮಿ ಗುರುತಿಸಿ ಸ್ಥಳೀಯರು, ಕೃಷಿಯಲ್ಲಿ ಆಸಕ್ತಿ ಇರುವವರು, ಸಮಾಜಸೇವಕರು ಹಾಗೂ ಸಂಘಸಂಸ್ಥೆಗಳನ್ನು ಒಗ್ಗೂಡಿಸಿ ಹಡಿಲು ಭೂಮಿ ಕೃಷಿ ಸಾಗುವಳಿ ಹಾಗೂ ಸಾವಯವ ಕೃಷಿ ಮಾಡಲು ಕಾರ್ಯೋನ್ಮುಖರಾಗುವಂತೆ ಶಾಸಕ ರಘುಪತಿ ಭಟ್ ಕರೆ ನೀಡಿದರು.

ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡಿನ ನಗರಸಭಾ ಸದಸ್ಯರು ಹಾಗೂ ನಗರಸಭೆಗೆ ಹೊಂದಿಕೊಂಡಿರುವ 6 ಗ್ರಾ. ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಬುಧವಾರ ಹಡಿಲು ಭೂಮಿ ಕೃಷಿ ಸಾಗುವಳಿ ಬಗ್ಗೆ ನಗರಸಭೆ ಸತ್ಯಮೂರ್ತಿ ಸಭಾಭವನದಲ್ಲಿ ಸಭೆ ನಡೆಸಿ ಚರ್ಚಿಸಿದರು.

ಹಡಿಲು ಭೂಮಿ ಕೃಷಿ ಸಾಗುವಳಿ ಹಾಗೂ ಸಾವಯವ ಕೃಷಿ ಬಗ್ಗೆ ಒಂದು ವಾರದೊಳಗಾಗಿ ಸಮಾಲೋಚನೆ ನಡೆಸಿ, ಏ. 15ರೊಳಗಾಗಿ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ನಿಟ್ಟೂರು ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಕೆಂಪೇಗೌಡ, ಬ್ರಹ್ಮಾವರ ವಲಯ ಕೃಷಿ ಸಂಶೋಧನ ಕೇಂದ್ರದ ಸಂಶೋಧನಾ ಸಹ ನಿರ್ದೇಶಕ ಡಾ| ಲಕ್ಷ್ಮಣ್, ನಗರಸಭೆ ಪೌರಾಯುಕ್ತ ಉದಯ ಶೆಟ್ಟಿ ಹಾಗೂ ನಗರಸಭಾ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಮಟ್ಟದ ಕೃಷಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ಬ್ರಹ್ಮಾವರದಲ್ಲಿ ಸಭೆ
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗ್ರಾಮಾಂತರ ಭಾಗದ 13 ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಶಾಸಕ ರಘುಪತಿ ಭಟ್ ಸಭೆ ನಡೆಸಿ ಹಡಿಲು ಭೂಮಿ ಕೃಷಿ ಸಾಗುವಳಿ ಬಗ್ಗೆ ಚರ್ಚಿಸಿದರು.

ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬ್ರಹ್ಮಾವರ ತಾಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಉಪಾಧ್ಯಕ್ಷ ಸುಧೀರ್ ಶೆಟ್ಟಿ, ಜಿ. ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!