Saturday, July 2, 2022
Home ಲೋಕಾಭಿರಾಮ ಆರಂಬ ನಟ ರಕ್ಷಿತ್ ಶೆಟ್ಟಿಗೆ ಕೇದಾರೋತ್ಥಾನ ಟ್ರಸ್ಟ್ ಬ್ರಾಂಡ್ ಅಂಬಾಸಿಡರ್ ಆಗೋ ಬಯಕೆ!

ನಟ ರಕ್ಷಿತ್ ಶೆಟ್ಟಿಗೆ ಕೇದಾರೋತ್ಥಾನ ಟ್ರಸ್ಟ್ ಬ್ರಾಂಡ್ ಅಂಬಾಸಿಡರ್ ಆಗೋ ಬಯಕೆ!

ಬ್ರಹ್ಮಾವರ: ಶಾಸಕ ರಘುಪತಿ ಭಟ್ ನೇತೃತ್ವದ ಹಡಿಲು ಭೂಮಿ ಕೃಷಿ ಯೋಜನೆಯ ಕೇದಾರೋತ್ಥಾನ ಟ್ರಸ್ಟಿಗೆ ಬ್ರಾಂಡ್ ಅಂಬಾಸಿಡರ್ ಆಗುವ, ಆ ಮೂಲಕ ಬರಡು ಭೂಮಿ ಕೃಷಿಯನ್ನು ಉತ್ತೇಜಿಸುವ ಬಯಕೆಯನ್ನು ನಟ ರಕ್ಷಿತ್ ಶೆಟ್ಟಿ ಪ್ರಕಟಿಸಿದರು.

ಭಾನುವಾರ ವಾರಂಬಳ್ಳಿ ಬಿರ್ತಿ ಹೇಮಾ ಶೆಟ್ಟಿ ಅವರ ಮನೆ ಬಳಿ ನಡೆದ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಟ್ರಾಕ್ಟರ್ ಚಲಾಯಿಸಿ ಡ್ರೈವಿಂಗ್ ಕಲಿತೆ
ಈ ಹಿಂದೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೃಷಿಯೇ ಪ್ರಧಾನ ಉದ್ಯೋಗವಾಗಿತ್ತು. ತನ್ನ ಬಾಲ್ಯದ ದಿನಗಳಲ್ಲಿ ತಾನು ಕೃಷಿ ಕಾಯಕದಲ್ಲಿ ತೊಡಗಿದ್ದುದನ್ನು ಮೆಲುಕು ಹಾಕಿದ ನಟ ರಕ್ಷಿತ್ ಶೆಟ್ಟಿ, ಗದ್ದೆಯಲ್ಲಿ ಹವ್ಯಾಸಕ್ಕಾಗಿ ಟ್ರಾಕ್ಟರ್ ಚಲಾಯಿಸುವ ಮೂಲಕ ಡ್ರೈವಿಂಗ್ ಕಲಿತೆ ಎಂದರು.

ಕೊರೊನಾ ಸಂದರ್ಭದಲ್ಲಿ ಅನೇಕ ಮಂದಿ ಯುವಜನತೆ ಮತ್ತೆ ತಮ್ಮೂರಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿರುವುದನ್ನು ಕಾಣುತ್ತೇವೆ ಎಂದ ರಕ್ಷಿತ್ ಶೆಟ್ಟಿ, ಕಳೆದ ಸುಮಾರು 10- 15 ವರ್ಷಗಳಿಂದ ಕರಾವಳಿಯಲ್ಲಿ ಕುಂಠಿತವಾಗುತ್ತಾ ಸಾಗಿದ ಭತ್ತ ಕೃಷಿ ಬಿದ್ದೇ ಹೋಗುತ್ತದೆ ಎನ್ನುವಾಗಲೇ ಶಾಸಕ ರಘುಪತಿ ಭಟ್ ಹಡಿಲು ಭೂಮಿ ಕೃಷಿ ಯೋಜನೆ ಕೈಗೆತ್ತಿಕೊಂಡು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ನಾಟಿ ಮಾಡಿದ ನಟ
ಬಳಿಕ ರಕ್ಷಿತ್ ಶೆಟ್ಟಿ ಕೆಸರಿನ ಗದ್ದೆಗಿಳಿದು ಭತ್ತದ ನೇಜಿ ನಾಟಿ ಮಾಡಿದರು. ಸಿನೆಮಾ ಮೂಲಕ ಬೇಸಾಯಕ್ಕೆ ಬೆಂಬಲ ನೀಡಲು ಯತ್ನಿಸುವುದಾಗಿ ತಿಳಿಸಿದರು.

ಆರ್ಗನೈಸೇಷನ್ ಡಿಸ್ಕಲೇನ್ ಜಾಗತಿಕ ಅಧ್ಯಕ್ಷ ರಾಜಾ ವಿಜಯಕುಮಾರ್. ಮೈಸೂರು ಮರ್ಕೆಂಟೈಲ್ ಕಂ. ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್. ಎಸ್. ಶೆಟ್ಟಿ, ಆನಂದ ಗ್ರೂಪ್ ಸ್ಥಾಪಕ ರಾಘವ ಶೆಟ್ಟಿ ಅವರೊಂದಿಗೆ ಶಾಸಕ ರಘುಪತಿ ಭಟ್ ಭೂಮಿಗೆ ಹಾಲೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಸದಾನಂದ ಪೂಜಾರಿ, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಭುಜಂಗ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ ಮತ್ತು ಮಹೇಶ್ ಠಾಕೂರ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಬ್ರಹ್ಮಾವರ ಮುಖ್ಯಸ್ಥ ಡಾ. ಬಿ. ಧನಂಜಯ್, ಹಿರಿಯ ಕ್ಷೇತ್ರಾಧಿಕಾರಿ ಶಂಕರ್, ಬಾರ್ಕೂರು ರುಕ್ಮಿಣಿ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು, ಸ್ಥಳೀಯ ಸಂಘ ಸಂಸ್ಥೆ ಸದಸ್ಯರು, ಕೃಷಿಕರು, ಭೂ ಮಾಲಕರು, ಪ್ರಮುಖರು, ಪಕ್ಷ ಕಾರ್ಯಕರ್ತರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!