Thursday, July 7, 2022
Home ಲೋಕಾಭಿರಾಮ ಆರಂಬ ನಿಮ್ಮದೇ ಬ್ರ್ಯಾಂಡ್ ಮಾಡಿ, ಹೆಚ್ಚು ಲಾಭ ಪಡೆಯಿರಿ: ರೈತರಿಗೆ ಸಲಹೆ

ನಿಮ್ಮದೇ ಬ್ರ್ಯಾಂಡ್ ಮಾಡಿ, ಹೆಚ್ಚು ಲಾಭ ಪಡೆಯಿರಿ: ರೈತರಿಗೆ ಸಲಹೆ

ಕಾರ್ಕಳ: ರೈತರು ತಮ್ಮೂರಿನ ವಿಶಿಷ್ಟ ಕೃಷಿ ಉತ್ಪನ್ನಗಳಿಗೆ ತಾವೇ ಬ್ರ್ಯಾಂಡಿಂಗ್ ಮಾಡಿ, ಸ್ವತಃ ತಾವೇ ಮಾರುಕಟ್ಟೆಗೆ ಪೂರೈಕೆ ಮಾಡಬೇಕು. ಅದರಿಂದ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯ ರಾಜ್ಯ ಕೃಷಿ ಸಚಿವ ಬಿ. ಸಿ. ಪಾಟೀಲ್ ಕರೆ ನೀಡಿದರು.

ಕುಕ್ಕುಂದೂರು ಗ್ರಾ. ಪಂ. ಮೈದಾನದಲ್ಲಿ ಸೋಮವಾರ ಕಾರ್ಕಳ ತಾಲೂಕಿನಲ್ಲಿ ಬೆಳೆಯುವ ವಿಶಿಷ್ಟ ಕುಚ್ಚಲಕ್ಕಿಗೆ ಕಾರ್ಲ ಕಜೆ ಎಂಬ ಬ್ರ್ಯಾಂಡಿಂಗ್ ಬಿಡುಗಡೆ ಮಾಡಿ ಮಾತನಾಡಿದರು.

ನಮ್ಮ ದೇಶದಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಮಧ್ಯವರ್ತಿಗಳು ಕಡಿಮೆ ಬೆಲೆಗೆ ಖರೀದಿಸಿ, ಅದಕ್ಕೊಂದು ಬ್ರ್ಯಾಂಡ್ ಹೆಸರು ಅಂಟಿಸಿ ಹೆಚ್ಚು ಬೆಲೆಗೆ ಮಾರುತ್ತಾರೆ. ಅದರಿಂದ ರೈತರಿಗೆ ಸಿಗಬೇಕಾದ ನಿಜವಾದ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಸಚಿವರು, ಈ ಬ್ರ್ಯಾಂಡಿಂಗ್ ನ್ನು ರೈತರು ತಾವೇ ಮಾಡಿಕೊಂಡಲ್ಲಿ ಎಲ್ಲ ಲಾಭವೂ ಅವರಿಗೇ ಸಿಗುತ್ತದೆ. ಆ ಮೂಲಕ ಪ್ರಧಾನಿ ಮೋದಿ ಹೇಳಿದ ರೈತರ ಆದಾಯ ದ್ವಿಗುಣ ಸುಲಭ ಸಾಧ್ಯವಾಗುತ್ತದೆ ಎಂದರು.

ಕೋಲಾರ ಪದ್ದತಿ ಅಳವಡಿಸಿ
ಕೋಲಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ, ಜೊತೆಗೆ ಅಲ್ಲಿ ರೈತರ ಆತ್ಮಹತ್ಯೆ ಪ್ರಮಾಣವೂ ಕಡಿಮೆ. ಕಾರಣ ಅಲ್ಲಿನ ರೈತರು ಒಂದೇ ಭೂಮಿಯಲ್ಲಿ ಆಲೂಗಡ್ಡೆ, ಟೊಮೆಟೋ, ಕಬ್ಬು, ತರಕಾರಿ ಬೆಳೆಯುತ್ತಾರೆ ಜೊತೆಗೆ ದನ, ಕುರಿಗಳನ್ನೂ ಸಾಕಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತಮ್ಮ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುತ್ತಾರೆ. ತಾವೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರುತ್ತಾರೆ. ಅದರಿಂದ ಅವರಿಗೆ ಹೆಚ್ಚು ಲಾಭ ದೊರೆಯುತ್ತಿದ್ದು, ರೈತರು ನೆಮ್ಮಂದಿಯಿಂದಿದ್ದಾರೆ ಎಂದು ಸಚಿವ ಪಾಟೀಲ್ ಉದಾಹರಿಸಿದರು.

ಎಲ್ಲರೂ ಇಸ್ರೇಲ್ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ, ಆದರೆ, ಮೊದಲು ಕೋಲಾರ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಣ, ಆಮೇಲೆ ಇಸ್ರೇಲ್ ಪದ್ಧತಿ ನೋಡೋಣ ಎಂದರು.

ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ. ಪಂ. ಸಿಇಓ ಡಾ. ನವೀನ್ ಭಟ್, ಉಡುಪಿ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕಿ ಭುವನೇಶ್ವರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮೊದಲಾದವರಿದ್ದರು.

ಕಾರ್ಕಳ ಕೃಷಿಕ ಸಮಾಜ ಅಧ್ಯಕ್ಷ ನವೀನಚಂದ್ರ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

519 ಲ್ಯಾಬ್ ಟು ಲ್ಯಾಂಡ್ ವಾಹನ
ಲ್ಯಾಬ್ ಟು ಲ್ಯಾಂಡ್ (ಪ್ರಯೋಗಾಲಯದಿಂದ ಕೃಷಿ ಭೂಮಿಗೆ) ಯೋಜನೆಯಡಿ ರಾಜ್ಯದ ಪ್ರತಿಯೊಂದು ರೈತ ಸಂಪರ್ಕ ಕೇಂದ್ರಗಳಿಗೆ ಒದಗಿಸುವುದಕ್ಕೆ 519 ಮೊಬೈಲ್ ಪ್ರಯೋಗಾಲಯ ವಾಹನ ಖರೀದಿಸಲು ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.

ಪ್ರಸ್ತುತ 40 ವಾಹನ ಖರೀದಿಸಿ ಉಡುಪಿಯೂ ಸೇರಿದಂತೆ ಪ್ರತೀ ಜಿಲ್ಲೆಗೆ ಒದಗಿಸಲಾಗಿದೆ. ಈ ವಾಹನದಲ್ಲಿ ಒಬ್ಬ ಕೃಷಿ ಪದವಿಧರ ತಂತ್ರಜ್ಞರಿದ್ದು, ಬೇಡಿಕೆ ಸಲ್ಲಿಸಿದ ರೈತನ ಕೃಷಿ ಭೂಮಿಗೆ ಹೋಗಿ ಮಣ್ಣು ಪರೀಕ್ಷೆ, ಬೆಳೆ ಪರೀಕ್ಷೆ, ಗೊಬ್ಬರ ಬಳಕೆಯ ಬಗ್ಗೆ ಸಲಹೆ ನೀಡುತ್ತಾರೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!