Monday, July 4, 2022
Home ಲೋಕಾಭಿರಾಮ ಆರಂಬ ಪೆನ್ನು ಹಿಡಿವ ಕೈಗಳಿಂದ ಪೈರು ನಾಟಿ

ಪೆನ್ನು ಹಿಡಿವ ಕೈಗಳಿಂದ ಪೈರು ನಾಟಿ

ಉಡುಪಿ, (ಸುದ್ದಿಕಿರಣ ವರದಿ): ವಾರಾಂತ್ಯದ ಭಾನುವಾರದ ರಜೆಯ ಮಜಾವನ್ನು ಕೆಸರಿನ ಗದ್ದೆಗಳಲ್ಲಿ ಕಳೆಯುವ ಮೂಲಕ ಉಡುಪಿಯ ಪತ್ರಕರ್ತರು ಪೆನ್ನು ಹಿಡಿವ ಕರಗಳು ಪೈರು ನೆಡಲೂ ಸೈ ಎಂಬುದನ್ನು ಜಗಜ್ಜಾಹೀರು ಮಾಡಿದರು.

ಶಾಸಕ ರಘುಪತಿ ಭಟ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಡಿಲು ಬಿದ್ದಿರುವ ಕೃಷಿಯೋಗ್ಯ ಭೂಮಿಯಲ್ಲಿ ಸಾವಯವ ಭತ್ತ ಕೃಷಿ ಮಾಡುವ ಯೋಜನೆಗೆ ಮಾಧ್ಯಮದ ಮಂದಿಯೂ ಕೈಜೋಡಿಸಿದರು.

ಕೇದಾರೋತ್ಥಾನ ಟ್ರಸ್ಟ್ ಮೂಲಕ ಬ್ರಹ್ಮಾವರ ಸಮೀಪದ ಹಾರಾಡಿಯ 10 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದ್ದು, ಭಾನುವಾರ ಹಾರಾಡಿ ಗ್ರಾಮದ ಹೊನ್ನಾಳ ಕಂಬಳಗದ್ದೆ ಮನೆ ಬಳಿಯ ಹಡಿಲು ಭೂಮಿ ಕೃಷಿ ಕಡೇ ನಾಟಿಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಕೈಜೋಡಿಸಿತ್ತು.

ಶಾಸಕ ರಘುಪತಿ ಭಟ್ ಸಹಿತ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಬ್ರಹ್ಮಾವರ ಜಿ.ಎಂ. ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಪ್ರಕಾಶ್ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹಾಗೂ ಕೃಷಿಕ, ವಿಜಯ ಕರ್ನಾಟಕ ಉಡುಪಿ ವರದಿಗಾರ ಅಜಿತ್ ಆರಾಡಿ ಭೂಮಿಗೆ ಹಾಲೆರೆಯುವ ಮೂಲಕ ಯಾಂತ್ರೀಕೃತ ನಾಟಿಗೆ ಚಾಲನೆ ನೀಡಿದರು.

ರೈತರಿಗೆ ಸವಲತ್ತು ಸಿಗಲಿ
ಈ ಸಂದರ್ಭದಲ್ಲಿ ಮಾತನಾಡಿದ ಅಜಿತ್ ಆರಾಡಿ, ಹೈನುಗಾರಿಕೆಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಮನೆಗಳಲ್ಲಿ ಹೈನುಗಾರಿಕೆ ಕಡಿಮೆಯಾದಂತೆ ಕೃಷಿಯೂ ಮಾಯವಾಗಿ ಕೃಷಿಭೂಮಿ ಹಡಿಲು ಬೀಳಲು ಆರಂಭವಾಯಿತು. ಈ ನಿಟ್ಟಿನಲ್ಲಿ ಪ್ರತೀ ಮನೆಯಲ್ಲಿ ಕನಿಷ್ಟ ಎರಡು ದನ ಸಾಕುವ ಮೂಲಕ ಮತ್ತೆ ಭತ್ತ ಕೃಷಿ ಆರಂಭಗೊಳ್ಳಬೇಕು ಎಂದು ಆಶಿಸಿದರು.

ಸರಿಯಾಗಿ ನಿರ್ವಹಿಸಿದಲ್ಲಿ ಕೃಷಿ ಲಾಭದಾಯಕ ಉದ್ಯೋಗ. ಆದರೆ, ಮೀನುಗಾರಿಕೆಗೆ ನೀಡುವಂತೆ ಕೃಷಿಕರಿಗೂ ಸರಕಾರ ಪ್ರೋತ್ಸಾಹ ನೀಡಬೇಕು. ಸುಲಭ ದರದಲ್ಲಿ ಗೊಬ್ಬರ, ಬಿತ್ತನೆ ಬೀಜ, ಯಾಂತ್ರೀಕರಣಕ್ಕೆ ಸಹಕಾರ, ಭತ್ತದ ಬೆಲೆಗೆ ಸೂಕ್ತ ಬೆಲೆ ಇತ್ಯಾದಿ ಕಲ್ಪಿಸಬೇಕು ಎಂದರು.

ಬಳಿಕ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ ಮಾರ್ಪಳ್ಳಿ ಸೇರಿದಂತೆ ಅನೇಕ ಮಂದಿ ಪತ್ರಕರ್ತರು ನೇಜಿ ನೆಟ್ಟರು.

ವಾರ್ತಾ ಇಲಾಖೆಯ ಶಿವಕುಮಾರ್ ಕೂಡಾ ನೇಜಿ ನೆಟ್ಟರು.

ಈ ಸಂದರ್ಭದಲ್ಲಿ ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಉಪಾಧ್ಯಕ್ಷೆ ಜಯಂತಿ ಪೂಜಾರಿ, ಸ್ಥಳೀಯರಾದ ಎ. ಬಾಲಕೃಷ್ಣ ಶೆಟ್ಟಿ, ಅಬು ಸಾಹೇಬ್, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಡಾ. ಶಂಕರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!