Monday, July 4, 2022
Home ಲೋಕಾಭಿರಾಮ ಆರಂಬ ನಿಟ್ಟೂರು ವಾರ್ಡ್ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ

ನಿಟ್ಟೂರು ವಾರ್ಡ್ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ

ಉಡುಪಿ: ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ನಿಟ್ಟೂರು ವಾರ್ಡಿನಲ್ಲಿ ಸುಮಾರು 13 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದ್ದು, ಬುಧವಾರ ನಿಟ್ಟೂರು ಆಡ್ಕದಕಟ್ಟೆ 1ನೇ ಅಡ್ಡರಸ್ತೆ ಬಳಿಯ ಹಡಿಲು ಭೂಮಿಯಲ್ಲಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಉಡುಪಿ ರೆಡ್ ಕ್ರಾಸ್ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಹಾಗೂ  ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಭೂಮಿಗೆ ಹಾಲೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಯೋಜನೆ ಉತ್ತಮವಾಗಿದ್ದು, ಅದರಿಂದ ಉದ್ಯೋಗ ಸೃಷ್ಟಿ ಜೊತೆಗೆ ಪರಿಸರಕ್ಕೂ ಸಹಕಾರಿಯಾಗಲಿದೆ. ಅಂತರ್ಜಲ ವೃದ್ಧಿ, ಆಹಾರದಲ್ಲಿ ಸ್ವಾವಲಂಬನೆ ಇತ್ಯಾದಿಯೂ ಸಾಧ್ಯವಾಗಲಿದೆ. ಯುವಜನತೆ ಕೃಷಿಯಲ್ಲಿ ಹೆಚ್ಚು ಆಕರ್ಷಿತರಾಗಿ ಅದರಲ್ಲಿ ತೊಡಗುವಂತೆ ಡಾ| ತಲ್ಲೂರು ಶಿವರಾಮ ಶೆಟ್ಟಿ ಕಿವಿಮಾತು ಹೇಳಿದರು.

ಶಾಸಕ ರಘುಪತಿ ಭಟ್ ನೇತೃತ್ವದ ಈ ಕಾರ್ಯ ಇತರ ಜಿಲ್ಲೆಯವರಿಗೂ ಪ್ರೇರಣೆ ನೀಡಿದ್ದು, ನೆರೆಯ ದ.ಕ. ಜಿಲ್ಲೆಯಲ್ಲಿಯೂ ಹಡಿಲು ಭೂಮಿ ಕೃಷಿ ಆರಂಭಗೊಂಡಿದೆ ಎಂದರು.

ಹಡಿಲು ಭೂಮಿಯನ್ನು ಹಸಿರಾಗಿಸುವ ಶಾಸಕ ರಘುಪತಿ ಭಟ್ ನೇತೃತ್ವದ ಕಾರ್ಯ ಶ್ಲಾಘನೀಯ. ಈ ಉತ್ತಮ ಕಾರ್ಯಕ್ಕೆ ತನ್ನ ಪಂಚಮಿ ಟ್ರಸ್ಟ್ ನಿಂದ ಸಹಕಾರ ನೀಡಲಾಗುವುದು ಎಂದು ಡಾ. ಹರಿಶ್ಚಂದ್ರ ಹೇಳಿದರು.

ನಾಟಿಯಲ್ಲಿ ಸಾಥ್
ಸ್ಟೆಥೊಸ್ಕೋಪ್ ಹಿಡಿವ ವೈದ್ಯರು, ಉದ್ಯಮಿಗಳು ಅಪ್ಪಟ ಮಣ್ಣಿನ ಮಕ್ಕಳಂತೆ ಗದ್ದೆಗಿಳಿದು ನೇಜಿ ನೆಟ್ಟರು.

ಅಭ್ಯಾಗತರಾಗಿದ್ದ ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಬಸ್ ಮಾಲಕರ ಸಂಘದ ಒಕ್ಕೂಟ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉದ್ಯಮಿ ಹಾಗೂ ಸಮಾಜ ಸೇವಕ ಗುರ್ಮೆ ಸುರೇಶ ಶೆಟ್ಟಿ ನೇಜಿ ನೆಟ್ಟರು. ಶಾಸಕ ರಘುಪತಿ ಭಟ್ ಕೂಡಾ ಸಹಕರಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಸಂತೋಷ್ ಜತ್ತನ್ ಮತ್ತು ಬಾಲಕೃಷ್ಣ ಶೆಟ್ಟಿ, ನಗರಸಭೆ ನಾಮನಿರ್ದೇಶಿತ ಸದಸ್ಯೆ ಸುಭೇದಾ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಸ್ಥಳೀಯರಾದ ಮಹಾಬಲ ಶೆಟ್ಟಿ ಮತ್ತು ರಂಜನ್, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!