ಉಡುಪಿ: ಕೃಷಿ ಯೋಗ್ಯ ಭೂಮಿಯನ್ನು ಹಡಿಲು ಬಿಟ್ಟು ಕೃಷಿ ಮಾಡದಿದ್ದಲ್ಲಿ ಅದು ರಾಷ್ಟ್ರೀಯ ನಷ್ಟ ಎಂದು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಜೆ. ಸಿ. ಮಾಧುಸ್ವಾಮಿ ವಿಶ್ಲೇಷಿಸಿದರು.
ಭಾನುವಾರ ಕಕ್ಕುಂಜೆಯಲ್ಲಿ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನಿವಾರ್ಯ ಕಾರಣಗಳಿಂದ ಬಂಜರು ಭೂಮಿಯನ್ನು ಬಳಸಲಾಗಿಲ್ಲ. ರೈತರ ಸಮಸ್ಯೆ ಅರ್ಥ ಮಾಡಿಕೊಂಡು, ಕೃಷಿಗೆ ಉತ್ತೇಜನ ನೀಡಬೇಕಾಗಿದೆ. ಈ ಹಿಂದೆ ಬಿತ್ತನೆಬೀಜ, ರಸಗೊಬ್ಬರ ಇತ್ಯಾದಿಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಈಗ ರೈತ ತನ್ನ ಬಂಡವಾಳದಲ್ಲಿ ಅದನ್ನೆಲ್ಲ ತೊಡಗಿಸಿಕೊಳ್ಳಬೇಕಾಗಿರುವುದರಿಂದ ಕೃಷಿ ದುಬಾರಿಯಾಗಿದೆ. ರೈತರಿಗೆ ಪೂರಕ ಯೋಜನೆ ರೂಪಿಸಿದಲ್ಲಿ ಜನರು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಆಗ ಜನತೆ ಪಟ್ಟಣಗಳಿಗೆ ವಲಸೆ ಹೋಗುವುದು ತಪ್ಪುತ್ತದೆ ಎಂದರು.
ಕರಾವಳಿಯಲ್ಲಿ ದೊಡ್ಡ ನೀರಾವರಿ ಯೋಜನೆ ರೂಪಿಸಲು ಅಸಾಧ್ಯ. ಈ ನಿಟ್ಟಿನಲ್ಲಿ ಪಶ್ಚಿಮ ವಾಹಿನಿ ಯೋಜನೆ ಸಮಗ್ರ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಅದರಿಂದ ಅವಿಭಜಿತ ದ.ಕ. ಜಿಲ್ಲೆಗೆ ಪ್ರಯೋಜನವಾಗಲಿದೆ ಎಂದರು.
ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಸ್ಥಳೀಯ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಮತ್ತು ಗಿರಿಧರ ಕರಂಬಳ್ಳಿ, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿ ಶಂಕರ್ ಮೊದಲಾದವರಿದ್ದರು