Thursday, July 7, 2022
Home ಲೋಕಾಭಿರಾಮ ಆರಂಬ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಯೋಜನೆ

ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಯೋಜನೆ

ಉಡುಪಿ, ಜು. 11 (ಸುದ್ದಿಕಿರಣ ವರದಿ): ರೈತರಿಗೆ ಕಾಡುಪ್ರಾಣಿಗಳ ಉಪಟಳ ನಿಯಂತ್ರಿಸಲು ಪರಿಣಾಮಕಾರಿ ಯೋಜನೆ ರೂಪಿಸಲಾಗುವುದು. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 20 ಎಕರೆ ಹಡಿಲು ಭೂಮಿ ಸಾವಯವ ಕೃಷಿಗೆ ಭಾನುವಾರ ಮಾರಾಳಿ ಹೊಸಮನೆ ಬೈಲಿನಲ್ಲಿ ನೇಜಿ ನೆಟ್ಟು ಮಾತನಾಡಿದರು.

ಪಾಳುಭೂಮಿಯನ್ನು ಹಸಿರಾಗಿಸುವ ಈ ಮಹತ್ತರ ಯೋಜನೆ ಶ್ಲಾಘನೀಯ ಎಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಕೃಷಿಭೂಮಿ ಹಡಿಲು ಬಿಡಲು ಕಾಡುಪ್ರಾಣಿಗಳ ಉಪಟಳವೂ ಕಾರಣ. ಕಾಡುಪ್ರಾಣಿಗಳ ಉಪಟಳದಿಂದಾಗಿ ಕೃಷಿ ಬೆಳೆಗಳಿಗೆ ಹಾನಿಯಾಗುವುದರಿಂದ ಅದನ್ನು ತಡೆಯಲು ಸಾಧ್ಯವಾಗದೆ ರೈತರು ನಷ್ಟ ಅನುಭವಿಸುತ್ತಿರುವುದರಿಂದ ಹೆಚ್ಚಿನ ಕೃಷಿಕರು ಕೃಷಿ ಭೂಮಿಯನ್ನು ಹಡಿಲು ಬಿಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಡುಪ್ರಾಣಿಗಳ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಅರೆಮಾದನಹಳ್ಳಿ ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಭೂಮಿಗೆ ಹಾಲೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾಳುಬಿದ್ದ ಕೃಷಿಯೋಗ್ಯ ಭೂಮಿಯನ್ನು ಹಸಿರಾಗಿಸುವುದು ದೇವರು ಮೆಚ್ಚುವ ಕಾರ್ಯ ಎಂದರು.

ನಾಲ್ಕೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ, ಉದ್ಯಮಿ ಕಾಶಿನಾಥ ಶೆಣೈ ಯಂತ್ರ ಹಾಗೂ ಕೈನಾಟಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಾಲ್ಕೂರು ಗ್ರಾ. ಪಂ. ಅಧ್ಯಕ್ಷ ಪ್ರಕಾಶ್ ನಾಯ್ಕ್, ಉಪಾಧ್ಯಕ್ಷೆ ಸುಮಿತ್ರಾ ಶರತ್ ಶೆಟ್ಟಿ, ಕೇದಾರೋತ್ಥಾನ ಟ್ರಸ್ಟ್ ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಅರಣ್ಯ ಇಲಾಖೆ ಅಧಿಕಾರಿಗಳಾದ ಮಿಲ್ಲೋ ಟ್ಯಾಗೋ, ಪ್ರಕಾಶ ಎಸ್. ನೆಟಾಲ್ಕರ್ ಮತ್ತು ಆಶಿಶ್ ರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಉಡುಪಿ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನರಾಜ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!