ಸಂಗೀತ ರಸಗ್ರಹಣ ಶಿಬಿರ
(ಸುದ್ದಿಕಿರಣ ವರದಿ)
ಉಡುಪಿ: ಮಣಿಪಾಲದ ಸರಿಗಮ ಭಾರತಿ ಸಂಗೀತ ಶಾಲೆಯ ಸ್ಥಾಪಕಿ, ವಿದುಷಿ ಉಮಾಶಂಕರಿ ಈಚೆಗೆ ಇಲ್ಲಿನ ಡಾ. ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್ ತೃತೀಯ ಸೆಮೆಸ್ಟರ್ ವಿದ್ಯಾರ್ಥಿ ಶಿಕ್ಷಕರಿಗಾಗಿ ಸಂಗೀತ ರಸಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಗೀತ ಕಲಿಕೆ, ಕಲಿಸುವಿಕೆ ಸುಲಭದ ಕೆಲಸವಲ್ಲ. ಅದು ಸಾಧನೆಯ ಪಥ. ಏಕಾಗ್ರತೆ, ಶ್ರಮ ಸಹಿಷ್ಣುತೆ, ನಿರಂತರ ಅಭ್ಯಾಸ ಮತ್ತು ಉತ್ತಮ ಕೇಳ್ಮೆಯಿಂದ ಭಾವಶುದ್ಧಿ ಹಾಗೂ ಸ್ವರರಾಗ ಶುದ್ಧಿ ಸಾಧಿಸಬಹುದು.
ಶಿಕ್ಷಕರು ಸಂಗೀತದ ಬಗ್ಗೆ ಕನಿಷ್ಠ ಪ್ರಾಥಮಿಕ ಜ್ಞಾನವನ್ನಾದರೂ ಹೊಂದುವುದು ಪರಿಣಾಮಕಾರಿ ಬೋಧನೆ ಕಲಿಕೆ ದೃಷ್ಟಿಯಿಂದ ಮಹತ್ವದ ಸಂಗತಿ ಎಂದು ಉಮಾಶಂಕರಿ ಅಭಿಪ್ರಾಯಪಟ್ಟರು.
ತನ್ನ ವಿದ್ಯಾರ್ಥಿಗಳಾದ ಪ್ರಾರ್ಥನಾ ಹಾಗೂ ಚಿನ್ಮಯ ಕೇಶವ ಅವರನ್ನೊಳಗೊಂಡು ರಾಗ, ತಾಳ, ಲಯ ಹಾಗೂ ಶ್ರುತಿಯ ಕಲ್ಪನೆಯನ್ನು ಪರಿಚಯಿಸಿ ವಿದ್ಯಾರ್ಥಿ ಶಿಕ್ಷಕರನ್ನು ಹಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿದರು.
ಕಾಲೇಜಿನ ಸಮನ್ವಯಾಧಿಕಾರಿ ಡಾ| ಮಹಾಬಲೇಶ್ವರ ರಾವ್ ಸ್ವಾಗತಿಸಿದರು. ವಿದ್ಯಾರ್ಥಿ ಶಿಕ್ಷಕಿ ಗ್ರೇಸ್ ಕರೆನ್ ವಂದಿಸಿದರು