Monday, July 4, 2022
Home ಲೋಕಾಭಿರಾಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರಿಗೆ ಡಿಡಿಪಿಐ ಪತ್ರ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರಿಗೆ ಡಿಡಿಪಿಐ ಪತ್ರ

ಉಡುಪಿ: ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಡಿಡಿಪಿಐ ಎನ್. ಎಚ್. ನಾಗೂರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಕೊರೊನಾ ಕಾರಣದಿಂದಾಗಿ ಕಳೆದ ಜೂನ್ ಆರಂಭವಾಗಬೇಕಿದ್ದ ಶಾಲೆಗಳು ಜನವರಿಗೆ ಆರಂಭವಾಗಿವೆ. ಕೋವಿಡ್ ಜೊತೆ ಬದುಕಬೇಕಾದ ಅನಿವಾರ್ಯತೆ ಕಾರಣ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶೈಕ್ಷಣಿಕ ಕಾರ್ಯಚಟುವಟಿಕೆ ನಡೆಸಬೇಕಾಗಿರುವುದು ಶಿಕ್ಷಣ ಇಲಾಖೆಯ ಇಂದಿನ ಅಗತ್ಯ.

ಅದರ ಭಾಗವಾಗಿ ಈಗಾಗಲೇ 2 ಹಂತದಲ್ಲಿ ವಿದ್ಯಾಗಮ, ದೂರದರ್ಶನ, ಚಂದನ ವಾಹಿನಿಯ ಮೂಲಕ 6ರಿಂದ 10ನೇ ತರಗತಿ ವರೆಗೆ ವೀಡಿಯೊ ಪಾಠಗಳನ್ನು ಸಂವೇದ ಕಾರ್ಯಕ್ರಮಡಿ ಪ್ರಸಾರ, ತರಗತಿ ಹಾಗೂ ವಿಷಯವಾರು ವಾಟ್ಸಾಪ್ ಗ್ರೂಪ್ ರಚಿಸಿ ವೀಡಿಯೊ ಪಾಠ ಹೇಳಿಕೊಡುವ ಮೂಲಕ ಮಕ್ಕಳ ಕಲಿಕೆ ನಿರಂತರತೆಗೆ ಶ್ರಮಿಸಲಾಗಿದೆ.

ಕೋವಿಡ್ ಸ್ವಲ್ಪ ಇಳಿಮುಖವಾಗುತ್ತಿದ್ದಂತೆ ಜ. 1ರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಲಾ ಸಂಚಲನ, ಪಾಲಕರ ಮನೆ ಮನೆ ಭೇಟಿ, ಮಕ್ಕಳೊಂದಿಗೆ ಸಂವಾದ, ಪ್ರಥಮ ಮಾಸಿಕ ಪರೀಕ್ಷೆ ನಡೆಸಲಾಗಿದ್ದು, ಗ್ರಾಮೀಣ ವಲಯದ ಬಾಲಕರು ಕಲಿಕೆಯಲ್ಲಿ ಹಿಂದುಳಿದಿರುವುದು ಕಂಡುಬಂದಿದೆ.
ಜೂನ್ ನಲ್ಲಿ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆ ನಡೆಯಲಿದ್ದು, ಗ್ರಾಮೀಣ ಬಾಲಕರು ಕಲಿಕೆಗೆ ಒಗ್ಗಿಕೊಳ್ಳದಿರುವುದು ಆತಂಕ ಮೂಡಿಸಿದ್ದು, ಪಾಲಕರು ಮನೆಯಲ್ಲಿ ಕೆಲವು ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಡಿಡಿಪಿಐ ಮನವಿ ಮಾಡಿದ್ದಾರೆ.

ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ವಿಷಯಗಳತ್ತ ಹೆಚ್ಚು ಗಮನಹರಿಸುವಂತೆ ಮಕ್ಕಳಿಗೆ ತಿಳಿಹೇಳುವುದು, ಮನೆಯಲ್ಲಿ ಕಲಿಕೆ ವಾತಾವರಣ ಕಲ್ಪಿಸುವುದು. ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸುವ ಜೊತೆಗೆ ಊಟದ ಬಗ್ಗೆಯೂ ಗಮನಹರಿಸುವಂತೆ ಡಿಡಿಪಿಐ ಸಲಹೆ ನೀಡಿದ್ದಾರೆ.

ಶಾಲಾರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ವಿಶೇಷ ತರಗತಿ ಹಾಗೂ ಶಾಲೆ ಬಿಟ್ಟ ನಂತರ ಒಂದೂವರೆ ಗಂಟೆ ಗುಂಪು ಅಧ್ಯಯನ ನಡೆಯುತ್ತಿದ್ದು, ಈ ಸಮಯಕ್ಕೆ ಮಕ್ಕಳನ್ನು ಪೂರ್ಣ ಸಿದ್ಧತೆಯೊಂದಿಗೆ ಪೋಷಕರು ಕಳಿಸಬೇಕು. ಗ್ರಾಮೀಣ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ತಾರದಿರುವುದು ಗಮನಕ್ಕೆ ಬಂದಿದ್ದು, ಮಕ್ಕಳು ಹೆಚ್ಚಿನ ಸಮಯ ತರಗತಿಯಲ್ಲಿ ಕುಳಿತು ಪಾಠ ಕೇಳಲು ಕಷ್ಟವಾಗುತ್ತಿದೆ. ಪೋಷಕರು ಮಧ್ಯಾಹ್ನದ ಊಟ ಕಳಿಸಿಕೊಡಬೇಕು. ಪರೀಕ್ಷೆಗೆ ಇನ್ನೂ ಮೂರು ತಿಂಗಳಿದ್ದು, ಉತ್ತಮವಾಗಿ ಅಧ್ಯಯನ ಮಾಡಿದರೆ ಮಕ್ಕಳು ಉತ್ತಮ ಅಂಕ ಗಳಿಸುವುದರಲ್ಲಿ ಸಂದೇಹವಿಲ್ಲ ಎಂದು ಡಿಡಿಪಿಐ ಪತ್ರದಲ್ಲಿ ಪೋಷಕರಿಗೆ ಮನವಿ ಮಾಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!