Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ

ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ

ಸುದ್ದಿಕಿರಣ ವರದಿ
ಭಾನುವಾರ, ಜೂನ್ 12

ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ
ಉಡುಪಿ: ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಓದನ್ನು ಸೀಮಿತವಾಗಿಸದೇ ಇತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಲ್ವಿನ್ ಆಂದ್ರಾದೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ
ಉದ್ಯಾವರ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದ ಯು.ಎಫ್.ಸಿ ಪುಸ್ತಕ ಭಂಡಾರ ವತಿಯಿಂದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.

ಪಠ್ಯ ಪುಸ್ತಕಗಳು ಮಕ್ಕಳನ್ನು ವಿದ್ಯಾವಂತರನ್ನಾಗಿಸಿದರೆ, ಇತರ ಪುಸ್ತಕಗಳು ಜ್ಞಾನವಂತರನ್ನಾಗಿಸುತ್ತವೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾವಂತರಾಗುವ ಜೊತೆಗೆ ಜ್ಞಾನವಂತರೂ ಆಗಬೇಕಾದ ಅನಿವಾರ್ಯತೆ ಇದೆ ಎಂದರು.

ಇಂದಿನ ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನೇ ಮರೆಯುತ್ತಿದ್ದಾರೆ. ಪ್ರಶ್ನಿಸುವ ಗುಣ ಇಲ್ಲದಿದ್ದಲ್ಲಿ ವಿಷಯ ಪರಿಣತಿ ಹೊಂದಲು ಸಾಧ್ಯವಿಲ್ಲ.

ಯಾವುದೇ ವಿಷಯದ ಎಲ್ಲಾ ಆಯಾಮಗಳನ್ನು ಅರಿತು ಒಪ್ಪಿಕೊಳ್ಳಬೇಕು ಎಂದರು.

ಪುಸ್ತಕ ಪ್ರೀತಿ ಬೆಳೆಯಲಿ
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಸಂಸ್ಥೆ ನಿರಂತರವಾಗಿ ವಿದ್ಯಾ ಕ್ಷೇತ್ರದಲ್ಲಿ ತನ್ನ ಸೇವೆ ಸಲ್ಲಿಸಿಕೊಂಡು ಬರುತ್ತಿದೆ.

ಇಂದು ಪುಸ್ತಕ ಭಂಡಾರದಿಂದ ಪುಸ್ತಕ ಪಡೆದ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ವಿಗಳಾಗಿ, ಜೊತೆಗೆ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು.

ನಿಮ್ಮ ಕಲಿಕೆ ಮುಗಿದ ಕೂಡಲೆ ಬುಕ್ ಬ್ಯಾಂಕಿಗೆ ಹಿಂತಿರುಗಿಸುವಂತೆ ಸಲಹೆ ನೀಡಿದರು.

ಅತಿ ಮೊಬೈಲ್ ಬಳಕೆ ಕೂಡದು
ಇಂದಿನ ಮಕ್ಕಳಲ್ಲಿ ಮೊಬೈಲ್ ಬಳಕೆ ಅತಿಯಾಗುತ್ತಿದೆ. ಅದರಿಂದ ವಿದ್ಯಾರ್ಥಿ ಸಮುದಾಯ ದಾರಿ ತಪ್ಪುವ ಅಪಾಯವಿದೆ. ಮೊಬೈಲ್ ಬಳಕೆಗೆ ಮಿತಿ ಹಾಕಿಕೊಳ್ಳಬೇಕು.

ಸಾಮಾಜಿಕ ಜಾಲತಾಣದಲ್ಲಿ ಬರುವ ಸಂಗತಿಗಳು ಜ್ಞಾನದ ಮೂಲ ಎಂಬ ಭ್ರಮೆಯಿಂದ ಹೊರಬಂದು ವಾಸ್ತವ ಅರಿತು ವರ್ತಿಸಬೇಕು. ಹಾಗಾದಾಗ ಮಾತ್ರ ಮುಂದಿನ ದಿನಗಳಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.

ನೆರವಿನ ಭರವಸೆ
ಸಂಸ್ಥೆ ನಿರ್ದೇಶಕ ಶರತ್ ಕುಮಾರ್, ಪಠ್ಯ ಪುಸ್ತಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಆರ್ಥಿಕ ಕಾರಣದಿಂದ ಉನ್ನತ ಶಿಕ್ಷಣ ಮುಂದುವರಿಸಲು ಅಸಾಧ್ಯವಾದ ಓರ್ವ ವಿದ್ಯಾರ್ಥಿ ತನ್ನನ್ನು ಸಂಪರ್ಕಿಸಿದಲ್ಲಿ ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಬದ್ಧ ಎಂದರು.

ಸಂಸ್ಥೆ ಅಧ್ಯಕ್ಷ ರಿಯಾಝ್ ಪಳ್ಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಸಾಲ್ಯಾನ್ ವಂದಿಸಿದರು. ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಉದ್ಯಾವರ ನಿರೂಪಿಸಿದರು.

ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಸುಮಾರು 150 ಮಂದಿ ವಿದ್ಯಾರ್ಥಿಗಳು ಬುಕ್ ಬ್ಯಾಂಕ್ ನ ಫಲಾನುಭವಿಗಳಾಗಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!