ಉಡುಪಿ: ಆಚಾರ್ಯ ಮಧ್ವರ ಸುಂದರ ಜೀವನದ ಅನುಸಂಧಾನಕ್ಕೆ ಮಧ್ವವಿಜಯದ ಅಧ್ಯಯನ ಬಹಳ ಮುಖ್ಯ. ಲಿಕುಚ ವಂಶದ ಮಹಾಕವಿ ನಾರಾಯಣ ಪಂಡಿತಾಚಾರ್ಯ ವಿರಚಿತ ಈ ಮಹಾಕಾವ್ಯ 16 ಸರ್ಗಗಳನ್ನು ಹೊಂದಿದೆ. ಇದು ಕೇವಲ ಕಾವ್ಯವಾಗಿರದೇ ಮಹಾಗ್ರಂಥವೂ ಆಗಿದೆ. ಈ ಕಾವ್ಯದಲ್ಲಿ ಅನೇಕ ಅಪೂರ್ವ ಐತಿಹಾಸಿಕ ಘಟನೆ ದಾಖಲಾಗಿದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ಇಲ್ಲಿಗೆ ಸಮೀಪದ ಹಿರಿಯಡಕ ಬಳಿಯ ಪುತ್ತಿಗೆ ಮೂಲ ಮಠದಲ್ಲಿ ನಡೆದ ಶ್ರೀ ಪುತ್ತಿಗೆ ವಿದ್ಯಾಪೀಠದ 37ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಮಧ್ವವಿಜಯದ ಅಧ್ಯಯನ ವೇದಾಂತದ ಉನ್ನತ ವ್ಯಾಸಂಗಕ್ಕೆ ನಾಂದಿಯಾಗಿದೆ. ಇಂಥ ಮಹಾಕಾವ್ಯವನ್ನು ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಲ್ಲಿ ಅಧ್ಯಯನ ಮಾಡುವ ಸುಯೋಗ ತಮಗೆ ದೊರೆಯಿತು ಎಂದು ಶ್ರೀಗಳು ಹೇಳಿದರು.
9 ವರ್ಷ ಕಾಲ ಈ ವಿದ್ಯಾಪೀಠದಲ್ಲಿ ಸಂಸ್ಕೃತ, ವೇದ, ವೇದಾಂತ, ಆಗಮ, ಜ್ಯೋತಿಷ್ಯ ಹಾಗೂ ಪೌರೋಹಿತ್ಯಗಳ ವಿಶೇಷ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಿ ಅಭಿನಂದಿಸಿ, ಆಶೀರ್ವದಿಸಿದರು.
ಸಾನ್ನಿಧ್ಯ ವಹಿಸಿದ್ದ ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಧ್ವ ವಿಜಯ ಅಧ್ಯಯನ ಪೂರ್ಣಗೊಳಿಸಿ ಮಂಗಳ ಅನುವಾದ ಮಾಡಿದರು.
ಮಧ್ವವಿಜಯ ಪಾಠ ಮಾಡಿದ ವಿದ್ವಾನ್ ಮಧ್ವರಮಣ ಆಚಾರ್ಯ ಮಧ್ವವಿಜಯ ಗ್ರಂಥದ ಮಹತ್ವ ವಿವರಿಸಿದರು.
ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಪಂಜ ಭಾಸ್ಕರ ಭಟ್, ರಘೂತ್ತಮಾಚಾರ್ ಬಿದರಹಳ್ಳಿ, ಪಾಡಿಗಾರು ಶ್ರೀಪತಿ ಆಚಾರ್ಯ, ಜಯತೀರ್ಥ ನೀಲೋಗಲ್ ಮೊದಲಾದವರಿದ್ದರು.
ವಾದಿರಾಜ ಸಂಶೋಧನ ಕೇಂದ್ರ ನಿರ್ದೇಶಕ ಡಾ| ಬಿ. ಗೋಪಾಲಚಾರ್ಯ ನಿರೂಪಿಸಿದರು. ಪ್ರಾಚಾರ್ಯ ಸುನಿಲ್ ಆಚಾರ್ಯ ವಂದಿಸಿದರು