Saturday, July 2, 2022
Home ಲೋಕಾಭಿರಾಮ ನಮಗಿನ್ನೂ ಪೂರ್ಣ ಸ್ವಾತಂತ್ರ್ಯ ಲಭಿಸಿಲ್ಲ

ನಮಗಿನ್ನೂ ಪೂರ್ಣ ಸ್ವಾತಂತ್ರ್ಯ ಲಭಿಸಿಲ್ಲ

ನಮಗಿನ್ನೂ ಪೂರ್ಣ ಸ್ವಾತಂತ್ರ್ಯ ಲಭಿಸಿಲ್ಲ

(ಸುದ್ದಿಕಿರಣ ವರದಿ)
ಮಣಿಪಾಲ: ನಾವು ರಾಜಕೀಯ ಸ್ವಾತಂತ್ರ್ಯ ಸಾಧಿಸಿದ್ದೇವೆಯಾದರೂ ಇನ್ನೂ ಸಂಪೂರ್ಣ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು ಬಾಕಿ ಇದೆ. ಅದು ಸಾಧ್ಯವಾದಾಗ ಮಾತ್ರ ಗಾಂಧೀಜಿ ಕನಸು ನನಸಾಗುತ್ತದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ವಿನೋದ್ ಭಟ್ ಹೇಳಿದರು.

ಮಾಹೆ ಆಶ್ರಯದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನ ಹೊಸ ಬಿಎ ಮತ್ತು ಎಂಎ ತರಗತಿ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿಯಾಗಬೇಕು. ಆ ಮೂಲಕ ಗಾಂಧೀಜಿ ಆಶಯ ಸಾಕಾರವಾಗಬೇಕು ಎಂದವರು ಆಶಿಸಿದರು.

ಒಂದಾಗಿ ಕಲಿಯದೇ ಶಿಕ್ಷಣ ಅಪೂರ್ಣವಾಗುತ್ತದೆ. ಹಾಗಾಗಿ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳನ್ನು ಬೇಗನೆ ಕ್ಯಾಂಪಸ್ ಗೆ ಕರೆಸಿಕೊಳ್ಳಬೇಕು ಎಂದು ಡಾ. ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಸಿ.ಪಿ.ಎ.ಎಸ್. ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ, ಮೂರು `ಪಿ’ಗಳಾದ ಪೊಯೆಟಿಕ್ಸ್ (ಸೌಂದರ್ಯಶಾಸ್ತ್ರಕ್ಕೆ ಇನ್ನೊಂದು ಅರ್ಥ), ಪಾಲಿಟಿಕ್ಸ್ (ಶಾಂತಿ ಅಧ್ಯಯನದತ್ತ ದಾರಿ) ಮತ್ತು ಫಿಲಾಸಫಿ (ಪರಿಸರದ ತತ್ವಶಾಸ್ತ್ರವಾಗಿ ರೂಪಾಂತರವಾಗುವುದು), ಜಿ.ಸಿ.ಪಿ.ಎ.ಎಸ್.ನಲ್ಲಿ ನೀಡುವ ಅಂತರಶಿಸ್ತೀಯ ಶಿಕ್ಷಣದ ಸಾರ ಸೆರೆಹಿಡಿಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) ಪದವಿ ತರಗತಿ ಆರಂಭ ಮತ್ತು ಎಂಎ (ಇಕೋಸೊಫಿಕಲ್ ಎಸ್ಥೆಟಿಕ್ಸ್) ಎಂಎ (ಆರ್ಟ್ ಆ್ಯಂಡ್ ಪೀಸ್ ಸ್ಟಡೀಸ್) ಮರುಪ್ರಾರಂಭಗೊಂಡಿತು.

ವಿದ್ಯಾರ್ಥಿಗಳಾದ ಮರಿಯಂ ರಾಯ್ ಮತ್ತು ಶ್ರೀಕೃಷ್ಣ ಅಡಿಗ ಮಣಿಪಾಲದ ವಿಶೇಷತೆ ಕುರಿತು ಮಾತನಾಡಿದರು.
ಶ್ರಾವ್ಯ ಬಾಸ್ರಿ ಟ್ಯಾಗೋರರ `ಎಲ್ಲಿ ಮಾನವಳುಕಿರದೋ…’ ಗೀತೆ ಹಾಡಿದರು. ಟ್ರೈಫೆನ್ ಫೋನ್ಸೆಕಾ ವಂದಿಸಿದರು. ಜೂಡಿ ಶೆರೀನ್ ನಿರೂಪಿಸಿದರು.

ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!