Monday, August 15, 2022
Home ಲೋಕಾಭಿರಾಮ ಆರೋಗ್ಯ ಆ. 10: ಅಲ್ಬೆಂಡೋಜೋಲ್ ಮಾತ್ರೆ ವಿತರಣೆ

ಆ. 10: ಅಲ್ಬೆಂಡೋಜೋಲ್ ಮಾತ್ರೆ ವಿತರಣೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಆ. 10: ಅಲ್ಬೆಂಡೋಜೋಲ್ ಮಾತ್ರೆ ವಿತರಣೆ
ಉಡುಪಿ: ಜಿಲ್ಲೆಯ 1ರಿಂದ 19 ವರ್ಷದೊಳಗಿನವರಿಗೆ ಜಂತುಹುಳು ನಿವಾರಣೆ ಮಾತ್ರೆಯನ್ನು ಆಗಸ್ಟ್ 10ರಂದು ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಚಿತ ಮಾತ್ರೆ ವಿತರಣೆ
ಸಾಮಾನ್ಯವಾಗಿ ಜಂತುಹುಳು ಮಣ್ಣಿನ ಮೂಲಕ ಜನರಿಗೆ ಹರಡುವಂಥದ್ದಾಗಿದ್ದು, ಅದರ ಸೋಂಕಿನಿಂದಾಗಿ ಮನುಷ್ಯನಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ದೈಹಿಕ ಹಾಗೂ ಮಾನಸಿಕ ದುರ್ಬಲತೆ ಉಂಟಾಗುತ್ತದೆ. ಅದರ ನಿಯಂತ್ರಣಕ್ಕಾಗಿ ಸರ್ಕಾರ 19 ವರ್ಷದೊಳಗಿನವರಿಗೆ ಉಚಿತವಾಗಿ ಜಂತುಹುಳು ನಿವಾರಕ ಅಲ್ಬೆಂಡೋಜೋಲ್ ಮಾತ್ರೆ ವಿತರಿಸುತ್ತಿದೆ ಎಂದರು.

ಜಂತುಹುಳು ಬಾಧೆಯಿಂದಾಗಿ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಕುಗ್ಗಿ ಕ್ರಿಯಾಶೀಲತೆ ಕುಂಠಿತಗೊಳ್ಳುತ್ತದೆ. ವಿಶೇಷವಾಗಿ ಮಕ್ಕಳು ಜಂತುಹುಳು ಸೋಂಕಿನಿಂದಾಗಿ ದಣಿದಂತಾಗಿ ಅಥವಾ ಅನಾರೋಗ್ಯ ಪೀಡಿತರಾಗಿ ಶಾಲೆಗೆ ಗೈರಾಗುವ ಸಾಧ್ಯತೆಗಳಿರುತ್ತವೆ ಎಂದರು.

ಜಂತುಹುಳು ನಿವಾರಣೆ ಮಾತ್ರೆ ವಿತರಿಸಲು ಅಗತ್ಯ ಪ್ರಮಾಣದ ದಾಸ್ತಾನು ಇಟ್ಟುಕೊಳ್ಳುವುದರೊಂದಿಗೆ ಅಂಗನವಾಡಿ, ಶಾಲಾ, ಕಾಲೇಜುಗಳಲ್ಲಿ ಶಿಕ್ಷಕರ ಮೂಲಕ ಅವರ ಸಮ್ಮುಖದಲ್ಲಿ ಸೇವಿಸಲು ಕ್ರಮ ಕೈಗೊಳ್ಳಬೇಕು. ಸಣ್ಣ ಮಕ್ಕಳಿದ್ದಲ್ಲಿ ಅವರಿಗೆ ಮಾತ್ರೆ ಪುಡಿ ಮಾಡಿ ಸೇವನೆಗೆ ನೀಡಬೇಕು ಎಂದರು.

ಸೂಕ್ತ ಮಾಹಿತಿ ನೀಡಿ
ಶಾಲಾ ಕಾಲೇಜುಗಳಿಂದ ಹೊರಗುಳಿದ 19 ವರ್ಷ ವಯೋಮಿತಿಯವರಿಗೆ ಅಂಗನವಾಡಿಗಳಲ್ಲಿ ಮಾತ್ರೆಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಗುರುತಿಸಿ, ನೀಡಬೇಕು ಎಂದ ಜಿಲ್ಲಾಧಿಕಾರಿ, ಕಾರ್ಯಕ್ರಮ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಅರ್ಹರು ಪ್ರಯೋಜನ ಪಡೆಯುವಂತೆ ಕ್ರಮ ವಹಿಸಬೇಕು ಎಂದರು.

ಒಂದೊಮ್ಮೆ ಆಗಸ್ಟ್ 10ರಂದು ಕಾರಣಾಂತರಗಳಿಂದ ಮಾತ್ರೆ ಪಡೆಯಲು ಅಸಾಧ್ಯವಾದಲ್ಲಿ ಆ. 17ರಂದು ವಿತರಿಸಲು ಮುಂದಾಗಬೇಕು.

ಜಂತುಹುಳು ನಿವಾರಣೆ ಕಾರ್ಯಕ್ರಮದ ಯಶಸ್ಸಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಹಕರಿಸುವಂತೆ ಸೂಚನೆ ನೀಡಿದರು.

ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ
ಆಗಸ್ಟ್ 1ರಿಂದ 15ರ ವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳುವ ಜೊತೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಓಆರ್.ಎಸ್ ಪೊಟ್ಟಣ ನೀಡುವ ಜೊತೆಗೆ ಅವುಗಳನ್ನು ತಯಾರಿಸುವ ವಿಧಾನವನ್ನೂ ತಿಳಿಸಲಿದ್ದಾರೆ ಎಂದರು.

ಸ್ವಚ್ಛತೆ ಕಾಪಾಡಿದಲ್ಲಿ ಮಾತ್ರ ಅತಿಸಾರ ಭೇದಿಯಿಂದ ದೂರ ಉಳಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಕೈಗಳನ್ನು ಸ್ವಚ್ಛಗೊಳಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುವುದು ಎಂದ ಡಿಸಿ ಕೂರ್ಮಾರಾವ್, ಪ್ರತಿಯೊಬ್ಬ ಸಾರ್ವಜನಿಕರೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಡಿಎಚ್.ಓ ಡಾ.ನಾಗಭೂಷಣ ಉಡುಪ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಎಂ. ಜಿ .ರಾಮ ಹಾಗೂ ವಿವಿಧ ಇಲಾಖಾನುಷ್ಠಾನಾಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!