Thursday, July 7, 2022
Home ಲೋಕಾಭಿರಾಮ ಆರೋಗ್ಯ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕು ಎದುರಿಸಲು ಸಹಕರಿಸಿ

ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕು ಎದುರಿಸಲು ಸಹಕರಿಸಿ

ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕು ಎದುರಿಸಲು ಸಹಕರಿಸಿ

ಉಡುಪಿ, ಡಿ 9 (ಸುದ್ದಿಕಿರಣ ವರದಿ): ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕು ಎದುರಿಸಲು ಸರ್ಕಾರಿ ಹಾಗೂ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ನ ಕಳೆದ 2 ಅಲೆಗಳಲ್ಲಿ ಸರ್ಕಾರದೊಂದಿಗೆ ಖಾಸಗಿ ಆಸ್ಪತ್ರೆಗಳು ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸಿ, ಸೋಂಕಿತರಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಿ ಎಲ್ಲಾ ರೀತಿಯ ಸಹಕಾರ ನೀಡಿವೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಸಹಕಾರ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದರು.

ಆಯುಷ್ಮಾನ್ ಆರೋಗ್ಯ ಭಾರತ್ ಯೋಜನೆಯಡಿ 5 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರಿಗೆ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳು ನೀಡಿರುವುದು ಪ್ರಶಂಸನೀಯ. ಸರ್ಕಾರದಿಂದ ಚಿಕಿತ್ಸೆ ವೆಚ್ವವನ್ನು ಆದ್ಯತೆ ಮೇಲೆ ಭರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಖಾಸಗಿ ಆಸ್ಪತ್ರೆಗಳು ಸಂಭಾವ್ಯ ಕೋವಿಡ್ ಸೋಂಕು ಎದುರಿಸಲು ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. 2ನೇ ಅಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯವಿದ್ದ ಪ್ರಾಣವಾಯು ಸಮಸ್ಯೆ ರಾಜ್ಯದಲ್ಲಿ ಉಂಟಾಗಿದ್ದ ಹಿನ್ನಲೆಯಲ್ಲಿ ಆಕ್ಸಿಜನ್ ಸಂಗ್ರಹ ಮಾಡುವ ಜಂಬೋ ಸಿಲಿಂಡರ್ ಮತ್ತು ಡ್ಯುರೋ ಸಿಲೆಂಡರ್ ಗಳನ್ನು ಆವಶ್ಯಕತೆಗೆ ತಕ್ಕಂತೆ ಇಟ್ಟುಕೊಳ್ಳಬೇಕು.

ಪ್ರಸ್ತುತ ಜಿಲ್ಲೆಯಲ್ಲಿ ಶೇ. 95ರಷ್ಟು ಜನ ಕೋವಿಡ್ ನಿರೋಧಕ ಲಸಿಕೆ ಪಡೆದಿದ್ದಾರೆ. ಶೇ. 5ರಷ್ಟು ಜನರು ಇತರ ಸಾಮಾನ್ಯ ಕಾಯಿಲೆ, ಗರ್ಭಿಣಿಯರೂ ಸೇರಿದಂತೆ ಮತ್ತಿತರರು ಲಸಿಕೆ ಪಡೆಯದೇ ಇರುವುದು ಕಂಡುಬಂದಿದೆ. ಅವರಿಗೆ ಲಸಿಕೆ ಪಡೆಯಲು ವೈದ್ಯರು ಶಿಫಾರಸು ಮಾಡುವಂತೆ ಸೂಚನೆ ನೀಡಿದರು

ಕೋವಿಡ್ ಚಿಕಿತ್ಸೆ, ಆಕ್ಸಿಜಿನ್ ಬಳಕೆ ಸೇರಿದಂತೆ ಅಗತ್ಯವಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಾಗಾರವನ್ನು ಕೆಎಂಸಿ ಸಹಕಾರದೊಂದಿಗೆ ಆಯೋಜಿಸಲು ಸೂಚಿಸಿದರು.

ಜಿಲ್ಲೆಯ ಪ್ರತಿಯೊಂದು ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗುವಾಗ ನಮೂದಿಸಿರುವ ಬೆಡ್ ಗಳ ಸಂಖ್ಯೆ ಸೇರಿದಂತೆ ಮತ್ತಿತರ ಮಾರ್ಪಾಡು ಮಾಡಿರುವ ಅಗತ್ಯ ಮಾಹಿತಿಗಳನ್ನು ಪ್ರಾಧಿಕಾರಕ್ಕೆ ನೀಡಬೇಕು ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಎಲ್ಲ ಖಾಸಗಿ ಅಸ್ಪತ್ರೆಗಳ ವೈದ್ಯರು ತಮ್ಮಲ್ಲಿಗೆ ಬರುವ ಜ್ವರ ಶೀತ ಕೆಮ್ಮು ಪ್ರಕರಣಗಳ ರೋಗಿಗಳಿಗೆ ತಪ್ಪದೇ ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ಸೂಚನೆ ನೀಡಬೇಕು. ಎಲ್ಲಾ ವೈದ್ಯಕೀಯ ಉಪಕರಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಪರಿಶೀಲಿಸಿಕೊಳ್ಳಬೇಕು.

ಅಗ್ನಿ ಸುರಕ್ಷಾ ಉಪಕರಣಗಳು ಸೇರಿದಂತೆ ಮತ್ತಿತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಡಿಎಚ್.ಓ ಡಾ. ನಾಗಭೂಷಣ ಉಡುಪ, ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರಶಾಂತ ಭಟ್, ಡಾ. ಶ್ರೀರಾಮ ರಾವ್ ಹಾಗೂ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಖಾಸಗಿ ಅಸ್ಪತ್ರೆಗಳಿಗೆ ನಿಯೋಜಿಸಿದ್ದ ನೋಡೆಲ್ ಅಧಿಕಾರಿಗಳು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!