Thursday, July 7, 2022
Home ಲೋಕಾಭಿರಾಮ ಆರೋಗ್ಯ ಮದ್ಯಪಾನ ರಹಿತ ಯಕೃತ್ ರೋಗ ಜಾಗೃತಿ

ಮದ್ಯಪಾನ ರಹಿತ ಯಕೃತ್ ರೋಗ ಜಾಗೃತಿ

ಸುದ್ದಿಕಿರಣ ವರದಿ
ಭಾನುವಾರ, ಜೂನ್ 12

ಮದ್ಯಪಾನ ರಹಿತ ಯಕೃತ್ ರೋಗ ಜಾಗೃತಿ
ಮಣಿಪಾಲ: ಅಂತಾರಾಷ್ಟ್ರೀಯ ನಾನ್ ಆಲ್ಕೊಹಾಲಿಕ್ ಸ್ಟೀಟೋಹೆಪಟೈಟಿಸ್ (ನ್ಯಾಷ್) ದಿನ ಅಂಗವಾಗಿ ಮದ್ಯಪಾನ ರಹಿತ ಸ್ಟೀಟೋಹೆಪಟೈಟಿಸ್ ಅಥವಾ ನ್ಯಾಶ್ ಜಾಗೃತಿ ನಿಟ್ಟಿನಲ್ಲಿ ಇಲ್ಲಿನ ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮದ್ಯಪಾನ ರಹಿತ ಯಕೃತ್ತಿನ ರೋಗಗಳ ಕುರಿತು ಸರ್ಕಾರಿ ವೈದ್ಯರಿಗೆ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.

ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್ ಮಾತನಾಡಿ, ಮದ್ಯಪಾನ ರಹಿತ ಯಕೃತ್ತಿನ ಕಾಯಿಲೆಗೆ ಜೀವನ ಶೈಲಿ ಪ್ರಮುಖ ಕಾರಣ. ಸ್ಥೂಲಕಾಯ ಮತ್ತು ಜಂಕ್ ಫುಡ್ ಮುಖ್ಯವಾಗಿದೆ. ಇದು ಸುಲಭವಾಗಿ ತಡೆಗಟ್ಟಬಹುದಾದ ರೋಗ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಮುದಾಯದೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕಾರಣ ಈ ರೋಗದ ಬಗ್ಗೆ ಅವರಿಗೆ ತಿಳುವಳಿಕೆ ಮತ್ತು ತರಬೇತಿ ನೀಡಲು ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಕುಂದಾಪುರ ಸರ್ಕಾರಿ ಆಸ್ಪತ್ರೆ ಆಡಳಿತ ಶಸ್ತಚಿಕಿತ್ಸಕ ಡಾ. ರಾಬರ್ಟ್ ರೆಬೆಲ್ಲೊ ಮತ್ತು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಅರಿವಳಿಕೆ ತಜ್ಞ ಡಾ. ಅಜಿತ್ ಕುಮಾರ್ ಶೆಟ್ಟಿ ಇದ್ದರು.

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಶಿರನ್ ಶೆಟ್ಟಿ ಮತ್ತು ಸಮುದಾಯ ವೈದ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಮುರಳೀಧರ ಕುಲಕರ್ಣಿ ಸಂಪನ್ಮೂಲವ್ಯಕ್ತಿಗಳಾಗಿದ್ದರು.

ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಸ್ವಾಗತಿಸಿ, ಸಮುದಾಯ ವೈದ್ಯ ವಿಭಾಗ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಅಶ್ವಿನಿಕುಮಾರ್ ವಂದಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಕಚೇರಿಯ 100ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!