ಇಂದು ಆಷಾಢ ಏಕಾದಶಿ. ಭಾರತೀಯ ಸಂಸ್ಕೃತಿಯಲ್ಲಿ ಉಪವಾಸಕ್ಕೆ ಮಹತ್ವವಿದೆ. ಉಪ ವಾಸ ಎಂದರೆ ದೇವರತ್ತ ನಮ್ಮ ಚಿತ್ತ ಹರಿಸುವುದು ಎಂದೂ ಅರ್ಥವಿದೆ. ದೇವಶಯನೀ ಏಕಾದಶಿ ಮಹತ್ವಪೂರ್ಣ ಆಚರಣೆ. ಈ ದಿನದ ಮಹತ್ವ ಬಗ್ಗೆ ಸನಾತನ ಸಂಸ್ಥೆಯ ವಿನೋದ ಕಾಮತ್ ಮನೋಜ್ಞವಾಗಿ ವಿವರಿಸಿದ್ದಾರೆ.
ವರ್ಷದ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ ಆಷಾಢ ಏಕಾದಶಿ ಅಥವಾ ದೇವಶಯನೀ ಏಕಾದಶಿ ವಿಶೇಷ ಮಹತ್ವ ಪಡೆದಿದೆ.
ಆಷಾಢ ಏಕಾದಶಿಯಂದು ಏಕಾದಶೀದೇವಿಯ ಉತ್ಪತ್ತಿಯಾಯಿತು. ಈ ತಿಥಿಯಂದು ಚಾತುರ್ಮಾಸ ಪ್ರಾರಂಭವಾಗುತ್ತದೆ. ಇದೇ ದಿನ ಶ್ರೀ ಮಹಾವಿಷ್ಣು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಲೀನನಾಗುತ್ತಾನೆ. ಇದೇ ತಿಥಿಗೆ ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದ ಎಂಬ ನಂಬಿಕೆ ಇದೆ.
ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತೀಕ ಶುಕ್ಲ ಏಕಾದಶಿ ಈ ನಾಲ್ಕು ತಿಂಗಳಲ್ಲಿ ದಕ್ಷಿಣಾಯನ ನಡೆಯುತ್ತಿರುತ್ತದೆ. ಆದ್ದರಿಂದ ಈ ಕಾಲಾವಧಿ ದೇವತೆಗಳ ನಿದ್ರೆಯ ಕಾಲ ಎಂದು ಹೇಳುತ್ತಾರೆ. ಈ ಕಾಲಾವಧಿಯಲ್ಲಿ ದೇವತೆಗಳ ತತ್ತ್ವಗಳ ಸಗುಣ-ನಿರ್ಗುಣ ತತ್ತ್ವಗಳ ಸ್ಪಂದನಗಳ ಪ್ರಕ್ಷೇಪಣೆ ಕಾರ್ಯ ಅಪ್ರಕಟ ಸ್ವರೂಪದಲ್ಲಿರುತ್ತದೆ. ಆದ್ದದರಿಂದ ಭೂಮಂಡಲದ ಕಡೆಗೆ ಅವುಗಳ ಪ್ರಕ್ಷೇಪಣೆ ಪ್ರಮಾಣ ಕಡಿಮೆ ಇರುತ್ತದೆ.
ಈ ಕಾಲಾವಧಿಯಲ್ಲಿ ದೇವತೆಗಳ ತತ್ತ್ವಗಳು ಅಪ್ರಕಟ ಸ್ವರೂಪದಲ್ಲಿರುವುದರಿಂದ ವಾಯುಮಂಡಲ ಮತ್ತು ಬ್ರಹ್ಮಾಂಡ ಮಂಡಲಗಳಲ್ಲಿ, ಹಾಗೆಯೇ ಭೂಮಿಯ ಮೇಲೆ ಅಸುರೀ ಶಕ್ತಿಗಳ ಪ್ರಾಬಲ್ಯ ಹೆಚ್ಚಾಗುತ್ತದೆ. ಇದರ ಪರಿಣಾಮ ಭೂಮಿಯ ಮೇಲಿನ ಸಜೀವ ಸೃಷ್ಟಿಯ ಮೇಲೂ ಆಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ಉಪವಾಸ, ಪೂಜಾವಿಧಿ, ವ್ರತ ಇತ್ಯಾದಿ ಮಾಡುವುದರಿಂದ ಜೀವದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣ ಕಡಿಮೆಯಾಗುತ್ತದೆ.
ಆಷಾಢ ಶುಕ್ಲ ಏಕಾದಶಿ ದಿನ ಶ್ರೀ ವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ, ಹಾಗೆಯೇ ಇಡೀ ರಾತ್ರಿ ಅವನ ಎದುರಿಗೆ ತುಪ್ಪದ ದೀಪ ಹಚ್ಚುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ.
ಇಷ್ಟೆಲ್ಲ ವೈಶಿಷ್ಟ್ಯವಿರುವ ಆಷಾಢ ಏಕಾದಶಿ ವ್ರತ ಆಚರಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ. ಅಲ್ಲವೇ?
- (ಸಂಗ್ರಹ: ವಿನೋದ ಕಾಮತ, ಸನಾತನ ಸಂಸ್ಥೆ)