Sunday, July 3, 2022
Home ಲೋಕಾಭಿರಾಮ ಭಾವತರಂಗ ಪ್ರಕೃತಿ ಪ್ರಿಯ ನಾಗ

ಪ್ರಕೃತಿ ಪ್ರಿಯ ನಾಗ

ಶ್ರಾವಣ ಮಾಸದ ಪಂಚಮಿಯಂದು ಬರುವ ಹಬ್ಬ ನಾಗರ ಪಂಚಮಿ. ಹಬ್ಬಗಳ ಸಾಲಿನಲ್ಲಿ ಮೊದಲಿಗೆ ಬರುವ ಈ ಹಬ್ಬ ಪ್ರಕೃತಿಗೆ ಸಂಬಂಧಿಸಿದ್ದು. ಮನುಷ್ಯ, ಪ್ರಕೃತಿಯಲ್ಲೂ ದೈವತ್ವವನ್ನು ಕಂಡ ಅಥವಾ ದೇವರಂತೆ ಪೊರೆಯುವ ಪ್ರಕೃತಿಯ ಕರುಣೆಯಿಂದಲೇ ಮನುಷ್ಯ ಜೀವನ ಸುಗಮ ಸಾಧ್ಯ ಎಂಬುದು ಇದರ ಹಿಂದಿನ ಆಶಯ. ಪ್ರಕೃತಿ ರಕ್ಷಣೆ ಮನುಜನಿಗೆ ವಿಹಿತ ಕರ್ಮ ಎಂಬುದು ಇದರಿಂದ ವೇದ್ಯ. ಈ ನಿಟ್ಟಿನಲ್ಲಿ ನಾಗರ ಪಂಚಮಿ ವಿಶೇಷತೆಯನ್ನು ಪಡೆಯುತ್ತದೆ.
ಈ ಹಬ್ಬದ ಆಚರಣೆಯ ಹಿಂದಿನ ಆಶಯ, ನಂಬಿಕೆ, ಕ್ರಮ ಇತ್ಯಾದಿಗಳನ್ನು ಒಪ್ಪವಾಗಿ ಹೆಣೆದುಕೊಟ್ಟಿದ್ದಾರೆ ಸ್ವತಃ ಕಲಾವಿದ, ಕಲಾಪೋಷಕ, ಪ್ರಕೃತಿಪ್ರೇಮಿ ರಾಜೇಶ್ ಭಟ್ ಪಣಿಯಾಡಿ.

ಪ್ರಕೃತಿ ಪ್ರಿಯ ನಾಗ

ಮಲೆನಾಡಿನ ಪಚ್ಚೆ ಸಿರಿ ಎಲ್ಲರನ್ನೂ, ಅದರಲ್ಲೂ ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುವ ಸುಂದರ ಸೊಬಗಿನ ತಾಣ. ಅದಕ್ಕೆ ಪ್ರಕೃತಿಯನ್ನು ಪ್ರೀತಿಸುವ ಜನರ ಹಬ್ಬ ಹರಿದಿನಗಳೂ ಅದಕ್ಕೆ ಕಾರಣ. ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ಆಚರಿಸಲ್ಪಡುವ ಹಬ್ಬ ನಾಗರ ಪಂಚಮಿ. ಇದು ಹಬ್ಬಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಹಬ್ಬ- ಹರಿದಿನಗಳ ಸಂಭ್ರಮಕ್ಕೆ ನಾಂದಿ ಹಾಡುತ್ತದೆ.

ಪ್ರಕೃತಿಯಲ್ಲಿ ದೇವರನ್ನು ಕಾಣುವ ಮಹಾಚಿಂತನೆಯಿಂದ ಈ ಹಬ್ಬ ಆಚರಣೆಗೆ ಬಂದಿರಬಹುದು. ಸದಾ ತಂಪನ್ನು ಬಯಸುವ ಸರೀಸೃಪ, ನಾಗ. ಇದು ಬನವನ್ನು ಆಶ್ರಯಿಸಿಕೊಂಡು ಹುತ್ತವನ್ನು ತನ್ನ ಮನೆ ಮಾಡಿಕೊಂಡಿರುತ್ತದೆ. ಕರುನಾಡಿನ ಜನರು ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ನಾಗದೇವರು ಎಂದು ಬಲವಾಗಿ ನಂಬಿದವರು. ಹಾಗಾಗಿ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ಒಡಹುಟ್ಟಿದವರ ಹಬ್ಬ
ನಾಗರ ಪಂಚಮಿಗೆ ಗರುಡ ಪಂಚಮಿ ಎಂದೂ ಕರೆಯುತ್ತಾರೆ. ಇದು ಒಡಹುಟ್ಟಿದವರ ಹಬ್ಬ ಎಂಬ ಪ್ರತೀತಿಯೂ ಇದೆ. ಉತ್ತರ ಕರ್ನಾಟಕದಲ್ಲಿ ಇದಕ್ಕೆ ಜೋಕಾಲಿ ಹಬ್ಬ ಎಂದೂ ಕರೆಯುತ್ತಾರೆ. ಹುತ್ತ ಅಥವಾ ನಾಗ ಶಿಲಾಪ್ರತಿಮೆಗೆ ಹಾಲೆರೆದು ಅರಶಿನ ಹಚ್ಚಿ ಫಲಪುಷ್ಪಗಳಿಂದ ಪೂಜಿಸಿದ ನಂತರ ಉಪಯೋಗಿಸಿದ ಅರಶಿನ, ಹುತ್ತದ ಮಣ್ಣಿಗೆ ಔಷಧೀಯ ಗುಣವಿದ್ದು, ಮುಖ್ಯವಾಗಿ ಮಣ್ಣನ್ನು ಹೊಕ್ಕುಳು ಅಥವಾ ಬೆನ್ನಿಗೆ ಹಚ್ಚಿ ಶುಭ ಹಾರೈಸುವ ಕ್ರಮವೂ ಇದೆ.

ನಾಗದೇವತೆಗಳು ಈ ಭೂಮಿಯನ್ನು ನಾವು, ಅಂದರೆ ಮನುಷ್ಯಾದಿ ಇತರ ಪ್ರಾಣಿಗಳ ವಾಸಕ್ಕಾಗಿ ಬಿಟ್ಟು ಕೊಟ್ಟ ಸ್ಥಳ. ಭೂಮಿ ತಾಯಿಯನ್ನು ಹೊತ್ತುಕೊಂಡವನು ಸಂಕರ್ಷಣ ರೂಪಿ ಶ್ರೀಮನ್ನಾರಾಯಣ. ಆದಿಶೇಷನನ್ನೇ ಹಾಸಿಗೆಯನ್ನಾಗಿಸಿ ನಾರಾಯಣ ಮಲಗಿದ್ದರೆ, ತಲೆಯಲ್ಲಿ ಭೂಮಿ ತಾಯಿ ವಿರಾಜಮಾನಳಾಗಿದ್ದಾಳೆ. ಹಾಗಾಗಿ ನಮಗೆ ಈ ಪೃಥ್ವಿಯಿಂದ ಯಾವುದೇ ಶ್ರೇಯಸ್ಸು ಸಿಗಬೇಕಾದರೆ ಮೊದಲು ಭೂಮಿಯ ಒಡೆಯ ನಾಗರಾಜನ ಅನುಗ್ರಹ ಬೇಕೇ ಬೇಕು!

ಅಷ್ಟ ಕುಲ ನಾಗ
ಪದ್ಮಪುರಾಣದ ಪ್ರಕಾರ ಕಶ್ಯಪ ಹಾಗೂ ಕದ್ರು ದಂಪತಿಗಳ ಮಕ್ಕಳು ಈ ಸರ್ಪ ಸಂಕುಲ. ಅನಂತ, ವಾಸುಕಿ, ತಕ್ಷಕ, ಕಾರ್ಕೋಟಕ, ಪದ್ಮ, ಮಹಾಪದ್ಮ, ಶಂಖ, ಕುಲಿಕ ಎಂಬ ಅಷ್ಟಕುಲದ ಪ್ರವರ್ತಕರು ಇವರ ಈ ಎಂಟು ಮಕ್ಕಳು.

ಪ್ರಾರಂಭದಲ್ಲಿ ಬ್ರಹ್ಮದೇವರು ಸರ್ಪ ಸಂಕುಲಗಳಿಗೆ ಆತ್ಮರಕ್ಷಣೆಗಾಗಿ ವಿಷದ ಹಲ್ಲನ್ನು ಕೊಟ್ಟಿದ್ದು, ಅದನ್ನು ದುರುಪಯೋಗಪಡಿಸಿಕೊಂಡ ಸರ್ಪಗಳು ಪಶು ಪಕ್ಷಿ ಮನುಷ್ಯ ಹೀಗೆ ಸಕಲ ಜೀವಜಂತುಗಳನ್ನು ಕಚ್ಚಿ ಸಾಯಿಸುತ್ತಿದ್ದವಂತೆ. ಪರಿಸ್ಥಿತಿ ಮಿತಿ ಮೀರಿದಾಗ ಮನುಷ್ಯರು ತಮ್ಮ ರಕ್ಷಣೆಗೆ ಬ್ರಹ್ಮದೇವರಲ್ಲಿ ಮೊರೆ ಹೋದಾಗ ಕೋಪಗ್ರಸ್ತನಾದ ಬ್ರಹ್ಮ, ದುಷ್ಟ ಸರ್ಪ ಸಂಕುಲ ನಾಶವಾಗಲಿ ಎಂದು ಶಾಪವಿತ್ತು ಪಾತಾಳ, ರಸಾತಳಕೆ ತೆರಳಲು ತಿಳಿಸುತ್ತಾನಂತೆ.

ಆ ಶಾಪದ ಫಲವೇ ವೈವಸ್ವತ ಮನ್ವಂತರದಲ್ಲಿ ತಂದೆ ಪರೀಕ್ಷಿತ ರಾಜನ ಸಾವಿಗೆ ಕಾರಣವಾದ ಸರ್ಪಕುಲ ನಾಶ ಮಾಡಲು ಮಗನಾದ ರಾಜ ಜನಮೇಜಯ ಸರ್ಪ ಯಜ್ಞ ಮಾಡಲು, ಸರ್ಪಗಳೆಲ್ಲ ಯಜ್ಞದಲ್ಲಿ ಆಹುತಿಯಾಗುತ್ತವೆ. ಆದರೆ, ಆ ಸಮಯದಲ್ಲಿ ಆಸ್ತಿಕ ಬಂಧುಗಳ ಕೋರಿಕೆಗೆ ಮಣಿದು ಆತ ಯಜ್ಞ ನಿಲ್ಲಿಸಲು, ಹಿಂದೊಮ್ಮೆ ಬ್ರಹ್ಮದೇವರ ಯಜ್ಞವೊಂದರಲ್ಲಿ ಸಾತ್ವಿಕರಾದ ಅಷ್ಟಕುಲ ನಾಗರು ಸಹಕರಿಸಿದ ಪುಣ್ಯಶೇಷದಿಂದ ಅವರು ಈ ಸರ್ಪ ಯಜ್ಞದಿಂದ ಮುಕ್ತಗೊಂಡು ಬ್ರಹ್ಮದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾದರಂತೆ.

ಆ ದಿನವನ್ನು ನಾಡಿನೆಲ್ಲೆಡೆ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ. ಅಲ್ಲದೆ ಇದೇ ನಾಗರ ಪಂಚಮಿಯ ದಿನ ಈ ನಾಗದೇವತೆಗಳಿಗೆ ವಿಶೇಷ ಅನುಗ್ರಹ ಶಕ್ತಿಯನ್ನು ಬ್ರಹ್ಮದೇವ ನೀಡಿದ ಎನ್ನುವುದು ಪುರಾಣದ ಹಿನ್ನೆಲೆ.

ಮನೋಕಾರಕ
ಮನೋಕಾರಕನಾದ ನಾಗ, ಮನುಷ್ಯನ ಮನಸ್ಸನ್ನು ಓದಿ ತಿಳಿಯುವ ಶಕ್ತಿ ಹೊಂದಿದ್ದು ಈ ಪುಣ್ಯಪರ್ವದಂದು ಯಾರೆಲ್ಲ ಭಕ್ತಿ ಶ್ರದ್ಧೆಯಿಂದ ನಾಗನಿಗೆ ಎಳನೀರು ಹಾಗೂ ಹಾಲನ್ನು ಎರೆದು ಅರಶಿನ ಫಲ ಪುಷ್ಪಾದಿಗಳಿಂದ ಪೂಜಿಸುತ್ತಾರೋ ಅವರ ಸಕಲ ಮನೋಭೀಷ್ಟಗಳನ್ನು ದಯಪಾಲಿಸುತ್ತಾನೆ ಎನ್ನುವುದು ಈ ನಾಗಾರಾಧನೆಯ ಹಿಂದಿರುವ ತಾತ್ಪರ್ಯ ಎನ್ನುವುದು ಬಲ್ಲವರ ಚಿಂತನೆ.

ನಾಗ ಸರ್ವ ದುರಿತಗಳನ್ನು ದೂರಮಾಡಲಿ. ಸಂತತಿ ಸಂಪತ್ತು ನಿರೋಗತ್ವ ದಯಪಾಲಿಸಲಿ. ಲೋಕಕ್ಕೇ ಶುಭವಾಗಲಿ.

ರಾಜೇಶ ಭಟ್ ಪಣಿಯಾಡಿ, ಉಡುಪಿ

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!