Sunday, July 3, 2022
Home ಲೋಕಾಭಿರಾಮ ಭಾವತರಂಗ ಬಂದು ಹೋಗುವ ಗಜಮುಖ

ಬಂದು ಹೋಗುವ ಗಜಮುಖ

ಪುರಾತನ ಆರಾಧನಾ ಕ್ರಮವಾದ ಪ್ರಥಮಪೂಜಿತ ವಿನಾಯಕನ ಪೂಜಾಕ್ರಮದ ಹಿಂದಿನ ಆಶಯವನ್ನು ಹಿರಿಯ ಪತ್ರಕರ್ತರೂ ಜಾನಪದ ವಿದ್ವಾಂಸರೂ ಆಗಿರುವ ಕೆ. ಎಲ್. ಕುಂಡಂತಾಯ ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಇದು ಸಾಂದರ್ಭಿಕ ಲೇಖನ.

ಬಂದು ಹೋಗುವ ಗಜಮುಖ
ಸುಮುಖನಾದರೂ ಅಸಂಗತ – ಅಸಂಬದ್ಧ

ಆಗಮಿಸಿ ನಿಷ್ಕ್ರಮಿಸುವ ದೇವರುಗಳಲ್ಲಿ ಗಣಪತಿಯೂ ಒಬ್ಬ ಋತುಮಾನಕ್ಕೆ ಅನುಗುಣವಾಗಿ ನಿರ್ದಿಷ್ಟ ದಿನಗಳಲ್ಲಿ ಬಂದು ಹೋಗುವ ಈ ದೇವರುಗಳ ಆರಾಧನಾ ವಿಧಾನವು ಎಷ್ಟು ವೈಭವದಿಂದ ನಡೆದರೂ ತಾತ್ಕಾಲಿಕ ಕಲ್ಪನೆ ಮತ್ತು ಅನುಸಂಧಾನ ಆಧರಿತವಾಗಿರುವುದು ಗಮನಾರ್ಹ.

ಆವಾಹನೆ – ವಿಸರ್ಜನೆಯೇ ಇಲ್ಲಿ ಪ್ರಧಾನವಾಗಿರುತ್ತವೆ. ಯಾವುದೇ ಗೊಂದಲಗಳಿಲ್ಲದೆ ಕೋಟ್ಯಂತರ ದೇವತೆಗಳನ್ನು- ದೇವರುಗಳನ್ನು ಆರಾಧಿಸುವ ಭಾರತೀಯ ಮನಸ್ಸು ವಿಶ್ವ ಚೈತನ್ಯವನ್ನು ತನ್ನ ಬದುಕಿಗೆ ಅನುಗುಣವಾಗಿ ರೂಪಿಸಿದೆ. ಸಾಂದರ್ಭಿಕವಾಗಿ ಸ್ವಾಗತಿಸಿ, ಪೂಜಿಸುವುದು ಬಳಿಕ ವಿಸರ್ಜಿಸುವುದು ನಮಗೆ ಸಹಜ. ವರ್ಷಪೂರ್ತಿ ವಿವಿಧ ಸಂದರ್ಭಗಳಲ್ಲಿ ಇಂಥ ದೇವರುಗಳ ಆಗಮನವಾಗುತ್ತಿರುತ್ತವೆ, ಆಚರಣೆಗಳೂ ನೆರವೇರುತ್ತವೆ.

ಗೌರಿ-ಗಣೇಶ, ನವರಾತ್ರಿಯ ಶಕ್ತಿಪೂಜೆ, ದೀಪಾವಳಿಯ ಬಲೀಂದ್ರ ಮುಂತಾದ ದೇವರುಗಳು ತಾತ್ಕಾಲಿಕವಾಗಿ ನೆಲೆಗೊಂಡು, ಪೂಜೆಗೊಂಡು ನಿರ್ಗಮಿಸುವಂತಹವರು. ಈ ಸ್ಥಿರವಲ್ಲದ ಉಪಾಸನೆಗೆ ಮಣ್ಣಿನ ಮೂರ್ತಿ ,ಕಲಶ, ದೀಪಗಳೇ ಪ್ರತೀಕಗಳಾಗುತ್ತವೆ.

ಗೌರಿ- ಗಣೇಶರಿಗೆ ಮಣ್ಣಿನ ಮೂರ್ತಿಯಲ್ಲಿ ಪೂಜೆ. ಗಣೇಶನ ಎಷ್ಟು ಭೀಮಗಾತ್ರದ ಪ್ರತಿಮೆಯನ್ನಾದರೂ ಮಣ್ಣಿನಲ್ಲೇ ರಚಿಸುವುದು, ಪೂಜೆಯ ಬಳಿಕ ನೀರಿನಲ್ಲಿ ವಿಸರ್ಜಿಸುವುದು. ಇತಿಹಾಸ ಕಾಲದ ಆರಂಭದಿಂದ ಗಣೇಶನಿಗೆ, ದುರ್ಗೆಗೆ ಸ್ಥಾಯೀ ದೇವಾಲಯಗಳು ನಿರ್ಮಾಣವಾದುವು.

ಆದರೆ ಮೂಲತಃ ಈ ಆರಾಧನೆಗಳು ತಾತ್ಕಾಲಿಕ ನೆಲೆಯಲ್ಲೇ ನಡೆಯುತ್ತಿದ್ದುವು ಎಂಬುದಕ್ಕೆ ಇಂದಿನ ಆಡಂಬರದ, ವೈಭವದ ಗಣಪತಿ, ದುರ್ಗೆಯರ ಉಪಾಸನಾ ಕ್ರಮದಲ್ಲಿ, ಅಲಂಕಾರಗಳ ಆಳದಲ್ಲಿ ಆಧಾರಗಳು ದೊರೆಯುತ್ತವೆ. ಸರಳ- ಸುಂದರ ಜನಪದೀಯ ಅನುಸಂಧಾನವು ಅಲ್ಲೇ ತೆರೆದುಕೊಂಡಿರುತ್ತದೆ. ಏಕೆಂದರೆ ಜನಪದ ಬದುಕು ಕಲ್ಪಿಸಿದ, ಮೂರ್ತ ಸ್ವರೂಪಕ್ಕೆ ಇಳಿಸಿದ ಪೂಜಾ ವಿಧಾನ-ಪ್ರತೀಕಗಳ ಚಿಂತನೆ ಅಲ್ಲೇ ಇರುತ್ತದೆ.

ಮುಗ್ಧ ಮನಸ್ಸುಗಳ ಆತಂಕಗಳಿಗೆ ಪ್ರಾಪ್ತಿಯಾದ ಪ್ರತಿಕ್ರಿಯೆಯೇ ಚೈತನ್ಯವಾದ. ಆದುದರಿಂದ ಚೈತನ್ಯವು ಅಸಾಧಾರಣ, ಅಲೌಕಿಕ ಈ ವಿಶ್ವಚೈತನ್ಯಕ್ಕೆ ಒದಗಿಸಲಾದ ಭೌತಿಕ ಸ್ವರೂಪವೇ ಪ್ರತೀಕ. ಇವುಗಳ ನೆಲೆಯಾಗಿ ಗುಡಿ, ದೇವಾಲಯ, ಸ್ಥಾನಗಳು, ಕಾಲ ಸರಿದು ಬಂದಂತೆ ಅಸ್ಪಷ್ಟ ಚಿತ್ರಣಗಳೇ ನಿಖರತೆಯನ್ನು ಪಡೆಯುತ್ತಾ ಅಥವಾ ಭಾವ ವಿಕಾಸಗಳೇ ಕಾರಣವಾಗುತ್ತಾ ಮೂರ್ತರೂಪಗಳು ಪಡಿಮೂಡಿರಬೇಕು. ಹಾಗೆ ಮೂಡಿಬಂದ ನಮ್ಮ ಗಣಪ ಜನಪದ ಬಿಂಬವು ಕಾಲಾಂತರದಲ್ಲಿ ವೈದಿಕ ಪ್ರಭಾವದಿಂದ ಮತ್ತಷ್ಟನ್ನು ಧರಿಸಿಕೊಳ್ಳುತ್ತಾ ನಾವು ಈಗ ಕಾಣುವ ಒಬ್ಬ ಗಣಪ ಪ್ರತ್ಯಕ್ಷಗೊಂಡ. ಇದೇ ಕ್ರಮದಲ್ಲಿ ಇತರ ದೇವರುಗಳು ಸ್ಪಷ್ಟವಾಗಿ ಸಾಕಾರಗೊಂಡರು. ಈ ವಿವರಗಳನ್ನು ನಿರೂಪಿಸಲು ಹಲವು ವಿದ್ವಾಂಸರ ಬರೆಹಗಳು ಆಧಾರವಾಗಿವೆ.

ಅಸಂಗತ-ಅಸಂಬದ್ಧ
ಅಸಂಗತ, ಅಸಂಬದ್ಧ ಪ್ರತಿಮಾಲಕ್ಷಣ. ಧಾರಣೆ- ವಾಹನಗಳಲ್ಲೂ ವೈರುಧ್ಯ, ಆಯುಧಗಳಲ್ಲೂ ಏನೋ ಒಂದು ಮೂಲದ ಸೆಳೆತ. ಪ್ರತ್ಯಕ್ಷ ವಿರೋಧ – ಪರಸ್ಪರ ವಿರೋಧದ ಈ ಭವ್ಯ ಬಿಂಬದಲ್ಲಿ ಪಪೂರ್ಣತೆಯನ್ನು ಸುಮುಖತೆಯನ್ನು, ಪ್ರಕೃತಿ- ವಿಕೃತಿಗಳನ್ನು ದಿವ್ಯ ಸಾನ್ನಿಧ್ಯವನ್ನು ಗುರುತಿಸಿರುವುದು ಅಚ್ಚರಿಯ ಸಂಗತಿ.

ಹೊಟ್ಟೆಗೆ ಬಿಗಿದುಕೊಂಡದ್ದು ಸರ್ಪ. ವಾಹನವಾಗಿ ಇಲಿ. ಇಲಿಯನ್ನು ಕಂಡ ಸರ್ಪ ಬೆನ್ನತ್ತಿ ತಿನ್ನುವ ಲೋಕರೂಢಿ. ಆದರೆ ಅಸಂಬದ್ಧ ಎನಿಸಿದರೂ ಈ ವಿನಾಯಕನ ಪ್ರತಿಮೆಯಲ್ಲಿ ಜಾತಿವೈರಗಳೇ ಇಲ್ಲ. ಮಾನವ ದೇಹ, ಆನೆಯ ತಲೆ, ಇದು ಒಂದು ರೀತಿಯ ಅಸಂಭವ.

ಇಂತಹ ಬೇರೆ ದೇವರುಗಳೂ ನಮ್ಮಲ್ಲಿದ್ದಾರೆ. ಇದು ಅಲೌಕಿಕದಲ್ಲಿ ಸಾಧ್ಯವೆನ್ನುತ್ತಾ ಗಣಪನನ್ನು ಅಲೌಕಿಕಕ್ಕೆ ಏರಿಸಿದರೂ ಆತ ಅಲ್ಲಿಯೂ ಸಲ್ಲುತ್ತಾನೆ.

ಬೇಟೆ ಸಂಸ್ಕೃತಿಯ ಪ್ರತೀಕವಾಗಿ ಆನೆ ಎನ್ನುತ್ತಾ ಆದಿಮದ ಕಲ್ಪನೆಯಿಂದ ಗಜಾನನನ ರೂಪವನ್ನೂ ಸಮರ್ಥಿಸಿದರೆ ಆತ ಬೇಟೆಯಿಂದ ಕೃಷಿ ಸಂಸ್ಕೃತಿಯ ವರೆಗೂ ತನ್ನ ಹರವನ್ನು ಪಡೆದುಕೊಳ್ಳುತ್ತಾನೆ. ಇಲ್ಲಿ ಜನ ಪದರದೊಂದಿಗೂ ಸ್ಥಾನ ಪಡೆಯುತ್ತಾನೆ. ಮಕ್ಕಳಿಂದ ವೃದ್ಧರ ವರೆಗೆ ಹೇಗೆ ತನ್ನ ಛಾಪನ್ನು ಒತ್ತಿ ಪ್ರಿಯನಾಗುತ್ತಾನೋ ಅಂತೆಯೇ ಸಮಷ್ಟಿಯಲ್ಲಿ ಅದ್ಭುತ ಜನಪ್ರಿಯ
ದೇವನಾಗುತ್ತಾನೆ. ಈ ಮಂಗಳಮೂರ್ತಿ ಪೂಜೆಯ ಅಥವಾ ಉಪಾಸನಾ ಅವಧಿಯಲ್ಲಿ ಆತ್ಮೀಯನಾಗುತ್ತಾ ಗಾಢವಾಗಿ ನಮ್ಮನ್ನು ಆವರಿಸುತ್ತಾನೆ. ಈಗ ಹೇಳಿ, ಈ ಮೂರ್ತಿ ಚಿಂತನೆಯಲ್ಲಿ ಅಸಂಗತವಿದೆಯೇ?

ಎಂತಹ ದುಷ್ಟ ಮರ್ದನದಲ್ಲೂ ಬಳಸಬಹುದಾದ ಆಯುಧ ಧರಿಸಿದ್ದರೂ ಗಣಪನ ಮೂರ್ತಿ ಪರಿಪೂರ್ಣವಾಗಬೇಕಿದ್ದರೆ ಒಂದು ಕೈಯಲ್ಲಿ ಮೋದಕ ಬೇಕು. ಇಲ್ಲಿಯೂ ಆಹಾರ- ಆಯುಧ ಸಾಂಗತ್ಯವೂ ಅಚ್ಚರಿ ಮೂಡಿಸುವಂತಹದ್ದು.

ಗಾಣಪತೇಯರು, ಅಧ್ಯಾತ್ಮ ಚಿಂತಕರು, ವೈದಿಕ ವಿದ್ವಾಂಸರು ಗಣಪನನ್ನು ಪ್ರಣವ ಸ್ವರೂಪನೆಂದೇ ಕೊಂಡಾಡಿದರು. ಮಣ್ಣಿನಿಂದ ತೊಡಗಿ ಬಾನೆತ್ತರಕ್ಕೆ ಹರಡಿಕೊಳ್ಳಬಲ್ಲ ವಿಸ್ತೃತ ವ್ಯಾಖ್ಯಾನ ನೀಡುತ್ತಾ ವಿರಾಟ್ ಗಣಪನನ್ನು ನಮ್ಮ ಮುಂದಿರಿಸಿದರು. ಹೀಗೆ ಗಣಪತಿ ಬಹುಪ್ರೀತ, ಬಹುಮಾನ್ಯ.ಅಸಂಗತದಲ್ಲಿ, ಅಸಂಬದ್ಧತೆಯಲ್ಲಿ, ಪರಸ್ಪರ ವಿರೋಧಗಳಲ್ಲಿ ಸಾಂಗತ್ಯವೇರ್ಪಡುತ್ತಾ ವಿಶ್ವಮಾನ್ಯ ದೇವನೊಬ್ಬ ಮಣ್ಣಿನಿಂದ ಎದ್ದು ಬರುತ್ತಾನೆ.

ಕಿವಿ, ಹೊಟ್ಟೆಗಳ ವೈಶಾಲ್ಯದಲ್ಲಿ ಪ್ರಪಂಚ ವಿಶಾಲತೆಯನ್ನು ಪ್ರಕಟಿಸುತ್ತಾ ಈ ಕಾಲದ ದ್ವಂದ್ವ ಹಾಗೂ ವಿರೋಧಾಭಾಸದ ಪ್ರಾಪಂಚಿಕ ವ್ಯವಹಾರಗಳಿಗೆ ಉತ್ತರ ನೀಡುತ್ತಾನೆ.

ಪರಿಸರ ಎಷ್ಟು ಅಸ್ವಾಭಾವಿಕವಾಗಿದ್ದರೂ ವಿಚಲಿತರಾಗದೆ ಬದುಕುವುದು, ಅಸಂಗತವಾಗಿದ್ದರೂ ಸುಸಂಗತವಾಗಿಸಿಕೊಂಡು ಕಾಲ ಪ್ರವಾಹದಲ್ಲಿ ಸಾಗುವುದು ನಾವು ಗಣಪನಿಂದ ಕಲಿಯಬೇಕಾದ ಪಾಠ. ಒಟ್ಟು ಗಣಪತಿ ನೀಡುವ ಸಂದೇಶವೂ ಸೂಕ್ಷ್ಮದೃಷ್ಟಿಯಿಂದ ಗಮನಿಸುತ್ತಾ ಹೆಚ್ಚು ಹೆಚ್ಚು ಕೇಳುತ್ತಾ, ಸ್ವೀಕರಿಸುತ್ತಾ ಬದುಕುವುದನ್ನೇ ತಾನೇ?

ಕೆ. ಎಲ್. ಕುಂಡಂತಾಯ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!