Sunday, July 3, 2022
Home ಲೋಕಾಭಿರಾಮ ಭಾವತರಂಗ ತಪ್ತಮುದ್ರಾಧಾರಣೆ ಹಿನ್ನೆಲೆ

ತಪ್ತಮುದ್ರಾಧಾರಣೆ ಹಿನ್ನೆಲೆ

ವೈಷ್ಣವರಿಗೆ ಆಷಾಢ ಶುದ್ಧ ಏಕಾದಶಿ (ಪ್ರಥಮೈಕಾದಶಿ)ಯಂದು ನಡೆಯುವ ಮುದ್ರಾಧಾರಣೆ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು. ಆತನ ಚಿನ್ಹೆಯಾದ ಶಂಖ ಮತ್ತು ಚಕ್ರಗಳು ನಮ್ಮಲ್ಲಿ ಅಚ್ಚೊತ್ತಿರಬೇಕು. ಆ ಮೂಲಕ ಭಗವಂತನ ಸ್ಮರಣೆಯಾಗಬೇಕು ಎಂಬ ಭಾವನೆಯಿಂದಲೆ ಶಯನೈಕಾದಶಿಯಂದು ತಪ್ತ ಮುದ್ರಾಧಾರಣೆ ಸಂಸ್ಕಾರ ಬೆಳೆದು ಬಂದಿದೆ.

ದೇಹ ಸಂಸ್ಕಾರ ವಿವಿಧ ಬಗೆ. ಜಾತಕರ್ಮ (ಜನನ), ಉಪನಯನ, ಸ್ನಾನ ಶೌಚ, ಶುಚಿ ಭೋಜನ, ಉಪವಾಸಾದಿ ಸ್ವಯಂ ಶ್ರೀಹರಿಯ ಆಯುಧಗಳ ಮುದ್ರಾಧಾರಣ. ಇದರಿಂದ ಸಂಸ್ಕಾರಗೊಂಡ ದೇಹ ಅಂತಃಸತ್ವವೆಂಬ ಶುದ್ಧಿ ಪಡೆದು ಸಾಧನಕ್ಕೆ ಹದಗೊಳ್ಳುತ್ತದೆ ಎಂಬುದು ನಂಬಿಕೆ.

ತಪ್ತ ಮುದ್ರಾಧಾರಣೆ ಹಿನ್ನೆಲೆ
ಹಿಂದೊಮ್ಮೆ ಇಂದ್ರಾದಿ ದೇವತೆಗಳೆಲ್ಲ ವೃತ್ರಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಿದರಂತೆ. ಆಗ ವಿಷ್ಣು `ಎಲೈ ದೇವತೆಗಳೇ, ನೀವೆಲ್ಲ ನನ್ನ ಶಂಖ ಚಕ್ರಾದಿ ಲಾಂಛನ ಧರಿಸಿ ದೈತ್ಯರೊಡನೆ ಯುದ್ಧ ಮಾಡಿ ನಿಮಗೆ ವಿಜಯ ಲಭಿಸುತ್ತದೆ’ ಎಂದು ಅಪ್ಪಣೆ ನೀಡಿದನಂತೆ. ಇಂದ್ರಾದಿಗಳು ಅದರಿಂದ ಕೃತಾರ್ಥರಾದರು. ಅಂದಿನಿಂದ ಕಾಮ, ಕ್ರೋಧಾರಿ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು.

ತಪ್ತ ಮುದ್ರಾಧಾರಣೆ ಮಹತ್ವವನ್ನು ಋಗ್, ಯಜುರ್, ಸಾಮ, ಅಥರ್ವ ವೇದಗಳಲ್ಲೂ, ಪದ್ಮ ಮೊದಲಾದ ಪುರಾಣಗಳಲ್ಲೂ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ. ಆಚಾರ್ಯ ಮಧ್ವರ ಸುದರ್ಶನ ದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮಧ್ವ ವಿಜಯದಲ್ಲಿ ದಾಖಲಾಗಿದೆ. ಅಂತೆಯೇ ಶ್ರೀ ವಾದಿರಾಜರ ಚಕ್ರಸ್ತುತಿ, ಶ್ರೀ ಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಳಿ ಹಾಗೂ ತಪ್ತ ಚಕ್ರ ಭೂಷಣಗಳಲ್ಲಿ ವಿವರವಾಗಿ ತಿಳಿಸಲಾಗಿದೆ.

ತಪ್ತ ಮುದ್ರಾಧಾರಣೆ ವಿಧಾನ
ಆಚಾರ್ಯ ಮಧ್ವರು ಹಾಕಿ ಕೊಟ್ಟ ಪರಂಪರೆಯಂತೆ ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತ ಮುದ್ರಾಧಾರಣೆ ಸ್ವೀಕರಿಸಬೇಕು. ಆಷಾಢ ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಸುದರ್ಶನ ಹೋಮ ನಡೆಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋ ಗುಣಗಳು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರ ಚಿತ್ತದಿಂದ ಗುರುಗಳಿಂದ ತಪ್ತಮುದ್ರಾಧಾರಣ ಪಡೆದುಕೊಳ್ಳಬೇಕು.

ವೈಷ್ಣವತ್ವಕ್ಕೆ ಧ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯಲಕ್ಷಣವೆಂಬುದು ತಪ್ತ ಮುದ್ರಾಧಾರಣದ ಹಿರಿಮೆ. ಅವರು ವೈಷ್ಣವರೆಂದು ಇತರರು ಗುರುತಿಸುವುದಕ್ಕಿಂತಲೂ ಮುಖ್ಯವಾಗಿ ತಾನು ವಿಷ್ಣು ಭಕ್ತ ಎಂದು ಸ್ವಂತಕ್ಕೆ ಮರೆಯದಿರಲೆಂದು ಹುಟ್ಟಿಕೊಂಡ ಈ ಪರಂಪರೆ ನಿಜಕ್ಕೂ ಅರ್ಥಪೂರ್ಣ

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!