Saturday, July 2, 2022
Home ಲೋಕಾಭಿರಾಮ ಭಾವತರಂಗ ಶಿಕ್ಷಕರಿಗೊಂದು ನಮನ

ಶಿಕ್ಷಕರಿಗೊಂದು ನಮನ

ಶಿಕ್ಷಕರಿಗೊಂದು ನಮನ

ಸೆ. 5 ಶಿಕ್ಷಕರ ದಿನ. ವಿದ್ಯೆ ನೀಡಿದ ಗುರುವನ್ನು ಸ್ಮರಿಸುವ ದಿನ. ಭಾರತದ ಮಾಜಿ ರಾಷ್ಟ್ರಪತಿ ಸರ್ವಪಲ್ಲೀ ರಾಧಾಕೃಷ್ಣನ್ ಜನ್ಮದಿನ. ಈ ದಿನದ ವಿಶೇಷತೆ ಮತ್ತು ಸಮಾಜದಲ್ಲಿ ಶಿಕ್ಷಕರ ಪಾತ್ರ ಬಗ್ಗೆ ಉಡುಪಿ ಕೇಂದ್ರೀಯ ವಿದ್ಯಾಲಯದ ಮುಖ್ಯಗುರು ರವೀಂದ್ರನಾಥ ಜಿ. ಭಟ್ ವಿವರಿಸಿದ್ದಾರೆ.

ಗುರು ಬ್ರಹ್ಮಾ ಗುರು ವಿಷ್ಣುಃ ಗುರು ದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

ಸೆ. 5 ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಒಂದು ಮಹತ್ವದ ದಿನ. ಈ ದಿನ ಮಹಾನ್ ದಾರ್ಶನಿಕ ಹಾಗೂ ನಮ್ಮ ದೇಶದ ರಾಷ್ಟ್ರಪತಿಯಾಗಿದ್ದ ಭಾರತರತ್ನ ಮಹಾನ್ ಮೇದಾವಿ ಡಾ| ರಾಧಾಕೃಷ್ಣನ್ ಅವರ ಜನ್ಮದಿನ.

ಅವರ ಜನ್ಮದಿನವನ್ನು ದೇಶ 1962ರಿಂದ ಶಿಕ್ಷಕರ ದಿನಾಚರಣೆ ಎಂಬುದಾಗಿ ಆಚರಿಸುತ್ತಾ ಬಂದಿದೆ. ಇದು ಶಿಕ್ಷಕರಿಗೆ ಅತ್ಯಂತ ಗೌರವದ ವಿಷಯ. ಸಮಾಜ ಸುಧಾರಕರು ಹಾಗೂ ದೇಶದ ನಿರ್ಮಾಪಕರಾದ ಶಿಕ್ಷಕರಿಗೆ ಈ ದಿನ ಕೋಟಿ ಕೋಟಿ ನಮನಗಳು.

ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಶಿಕ್ಷಕರಿಗೆ ಅತ್ಯುನ್ನತವಾದ ಗೌರವದ ಸ್ಥಾನವಿದೆ. `ಆಚಾರ್ಯ ದೇವೋಭವ’ ಎಂಬ ಉಪನಿಷತ್ತಿನ ವಾಕ್ಯದ ಅನುಸಾರವಾಗಿ ಭಾರತದಲ್ಲಿ ಶಿಕ್ಷಕರನ್ನು ದೇವರಿಗೆ ಹೋಲಿಸಿ ಗೌರವಿಸಲಾಗುತ್ತಿದೆ. ಶಿಕ್ಷಕ ವೃತ್ತಿ ಬೇರೆ ವೃತ್ತಿಯಂತಲ್ಲ, ವ್ಯಕ್ತಿತ್ವ ನಿರ್ಮಾಣ ಮತ್ತು ಅದರಿಂದ ಉತ್ತಮ ಸಮಾಜ ನಿರ್ಮಾಣ ಶಿಕ್ಷಕರ ಜವಾಬ್ದಾರಿ. ಯಾವ ರೀತಿ ಶಿಲ್ಪಿ ತನ್ನ ಕೈಚಳಕದಿಂದ ಕಲ್ಲನ್ನು ಸುಂದರ ಮೂರ್ತಿಯನ್ನಾಗಿಸುತ್ತಾನೆಯೋ ಅದೇ ರೀತಿ ಹೂವಿನಂಥ ಮುಗ್ಧ ಮನಸ್ಸುಳ್ಳ ವಿವಿಧ ಸಮಾಜದ ಹಿನ್ನೆಲೆಯಿಂದ ಶಾಲೆಗೆ ಬರುವ ಮಕ್ಕಳನ್ನು ಅರಿತು ಅವರವರ ಬುದ್ಧಿಶಕ್ತಿಗೆ ಅನುಗುಣವಾಗಿ ಅವರ ಮನಸ್ಸನ್ನು ತಿಳಿದು ಅವರನ್ನು ಸರಿಯಾದ ಮಾರ್ಗದೆಡೆಗೆ ತಿದ್ದಿ ತೀಡಿ ಉತ್ತಮ ನಾಗರಿಕರನ್ನಾಗಿ ಮಾಡುವ ಪುಣ್ಯದ ಕಾರ್ಯ ಶಿಕ್ಷಕನದ್ದಾಗಿದೆ. ಇದು ದೈವೀಕಾರ್ಯಕ್ಕೆ ಸಮಾನವಾಗಿದೆ.

ಸಮಾಜದಲ್ಲಿ ಒಬ್ಬ ಒಳ್ಳೆಯ ವೈದ್ಯ, ತಂತ್ರಜ್ಞ, ರಾಜಕಾರಣಿ, ಕವಿ, ಸಾಹಿತಿ, ಲೇಖಕ, ಅರ್ಚಕ, ಚಾಲಕ, ರೈತರನ್ನು ನಾವು ಕಾಣುತ್ತಿದ್ದೇವೆ. ಅದಕ್ಕೆಲ್ಲ ಕಾರಣ ಅವರ ಹಿಂದಿರುವ ಒಬ್ಬ ಉತ್ತಮ ಶಿಕ್ಷಕ. ಸಮಾಜದಲ್ಲಿ ಒಳ್ಳೆಯ ಸಮಾಜ ಅಥವಾ ಕೆಟ್ಟ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವೇ ಪ್ರಧಾನವಾಗಿರುತ್ತದೆ.

ಗುರು ಎಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುವವ ಎಂದರ್ಥ. ಗುರು ಎಂಬ ಪದದಲ್ಲಿ `ಗು’ ಶಬ್ದ `ಅಂಧಕಾರ’ ಎಂಬ ಅರ್ಥ ಕೊಟ್ಟರೆ, `ರು’ ಶಬ್ದ ಅಂಧಕಾರವನ್ನು ಹೋಗಲಾಡಿಸುವವನು. ಅಂದರೆ ಅಂಧಕಾರ (ಕತ್ತಲು)ವನ್ನು ಹೋಗಲಾಡಿಸಿ ಬೆಳಕಿನೆಡೆಗೆ ದಾರಿ ತೋರಿಸುವವನೇ ಗುರು ಎಂದೆನಿಸುತ್ತಾನೆ. ಸಮಾಜದಲ್ಲಿ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನ ದೀವಿಗೆಯನ್ನು ಹೊತ್ತಿಸುವವನೇ ಗುರು. ಗುರು ಎಂಬುವವರು ಶಿಕ್ಷಕ, ಆಚಾರ್ಯ, ಅಧ್ಯಾಪಕ, ಉಪಾಧ್ಯಾಯ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳಲ್ಪಡುತ್ತಾರೆ.

`ಶಿ’- ಶಿಕ್ಷಿಸಿ, `ಕ್ಷ’- ಕ್ಷಮಿಸಿ, `ಕ’- ಕಲಿಸುವ ಎಂದರೆ ಶಿಕ್ಷಿಸಿ ಕ್ಷಮಿಸಿ ಕಲಿಸುವವನೇ ಶಿಕ್ಷಕ ಎಂದರ್ಥ.

ನಮ್ಮ ಪುರಾಣ, ಇತಿಹಾಸಗಳನ್ನು ಅವಲೋಕಿಸಿದಾಗ ಅನೇಕ ಇಂಥ ಗುರು-ಶಿಷ್ಯರ ಪರಂಪರೆ ನಮಗೆ ಮಾದರಿಯಾಗಿ ಕಂಡುಬಂದಿವೆ. ಶ್ರೀರಾಮನಿಗೆ ವಿಶ್ವಾಮಿತ್ರ, ಶ್ರೀಕೃಷ್ಣನಿಗೆ ಸಾಂದೀಪನಿ ಮುನಿ, ಶ್ವೇತಕೇತುವಿಗೆ ಆರುಣಿ, ಪಾಂಡವರಿಗೆ ದ್ರೋಣಾಚಾರ್ಯ, ಶಿವಾಜಿಗೆ ಸಮರ್ಥ ರಾಮದಾಸ, ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸ ಈ ರೀತಿಯಾಗಿ ಸಾವಿರಾರು ಗುರು- ಶಿಷ್ಯ ಪರಂಪರೆಯನ್ನು ನಾವು ಕಾಣಬಹುದು.

ಅನ್ನದಾನ ಹಸಿವನ್ನು ನೀಗಿಸಿದರೆ, ವಿದ್ಯಾದಾನ ಜ್ಞಾನದ ಹಸಿವನ್ನು ನೀಗಿಸುತ್ತದೆ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುಗಳ ಪಾತ್ರ ಅನನ್ಯ.

ಒಬ್ಬ ಶಿಕ್ಷಕ ವಿದ್ಯಾರ್ಥಿಯ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಶಕ್ತಿಯಾಗಿರುತ್ತಾನೆ. ಗುರು ಶಿಕ್ಷಣ ಕೊಟ್ಟು ತಿದ್ದಿ ತೀಡಿ ವಿದ್ಯಾರ್ಥಿಯ ಯಶಸ್ಸಿಗೆ ಕಾರಣೀಭೂತನಾಗಿರುತ್ತಾನೆ. ಗುರುವನ್ನು ಸದ್ಗುರುವನ್ನಾಗಿನೋಡಲು ಈ ದಿನ ಅಂದರೆ ಸೆಪ್ಟೆಂಬರ್ 5 ಮಹತ್ವದ ದಿನವಾಗಿದೆ.
A Good Teacher is equal to a thousand priests ಅಂದರೆ ಒಬ್ಬ ಒಳ್ಳೆಯ ಶಿಕ್ಷಕ ಸಾವಿರ ಅರ್ಚಕರಿಗೆ ಸಮಾನ.

ಪ್ರಸ್ತುತ ಗುರುಕುಲ ಪದ್ಧತಿ ಮಾಯವಾಗಿ ಆಧುನಿಕ ಶಿಕ್ಷಣಪದ್ಧತಿಯಲ್ಲಿ ನಾವಿದ್ದೇವೆ. ಈಗಿನ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಕರ ವೃತ್ತಿಯೂ ಒಂದು ಸವಾಲಾಗಿದೆ. ಪಾಠ ಪ್ರವಚನದ ಜೊತೆಗೆ ಸರ್ಕಾರದಿಂದ ಆದೇಶಿಸಲ್ಪಟ್ಟ ಅನೇಕ ಕಾರ್ಯಕ್ರಮಗಳನ್ನು ಉದಾಹಾರಣೆಗೆ ಬಿಸಿಊಟ, ಜನಗಣತಿ, ಚುನಾವಣೆ ಕಾರ್ಯ, ಈಗಿನ ಕೋವಿಡ್-19, ಆನ್ ಲೈನ್ ತರಗತಿ ಈ ಎಲ್ಲಾ ಕಾರ್ಯವನ್ನೂ ಶಿಕ್ಷಕರು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ.

ಆದ್ದರಿಂದ ನಾವೆಲ್ಲರೂ ಈ ದಿನ ನಮಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ವಿದ್ಯೆ ನೀಡಿದ ಎಲ್ಲಾ ನಮ್ಮ ಶಿಕ್ಷಕ ವೃಂದದವರನ್ನು ಗೌರವಪೂರ್ವಕವಾಗಿ ಸ್ಮರಿಸಿಕೊಳ್ಳೋಣ.

ಅದೇ ಅವರಿಗೆ ನಾವೆಲ್ಲರೂ ನೀಡುವ ಗುರುದಕ್ಷಿಣೆಯಾಗಿರುತ್ತದೆ. ನಾವೆಲ್ಲರೂ ಒಂದೇ ಕಂಠದಿಂದ `ಜೈ ಶಿಕ್ಷಕ್’ ಎಂದು ಘೋಷಿಸೋಣ.

ರವೀಂದ್ರನಾಥ ಜಿ. ಭಟ್
ಪ್ರಾಚಾರ್ಯರು, ಕೇಂದ್ರಿಯ ವಿದ್ಯಾಲಯ,
ಉಡುಪಿ.
9945640504

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!