Tuesday, May 17, 2022
Home ಲೋಕಾಭಿರಾಮ ಭಾವತರಂಗ ಮಕ್ಕಳನ್ನು ಕಲಾವಿದರನ್ನಾಗಿ ರೂಪಿಸುತ್ತಿರುವ ಶಿಕ್ಷಕ ಮೋಹನ್ ಹೊಸ್ಮಾರು

ಮಕ್ಕಳನ್ನು ಕಲಾವಿದರನ್ನಾಗಿ ರೂಪಿಸುತ್ತಿರುವ ಶಿಕ್ಷಕ ಮೋಹನ್ ಹೊಸ್ಮಾರು

ಸುದ್ದಿಕಿರಣ ವರದಿ
ಭಾನುವಾರ, ಮೇ 8

ಮಕ್ಕಳನ್ನು ಕಲಾವಿದರನ್ನಾಗಿ ರೂಪಿಸುತ್ತಿರುವ ಶಿಕ್ಷಕ ಮೋಹನ್ ಹೊಸ್ಮಾರು
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಸಕಾಲದಲ್ಲಿ ಗುರುತಿಸಿ ಅದಕ್ಕೆ ಸೂಕ್ತ ಪ್ರೋತ್ಸಾಹ, ತರಬೇತಿ ನೀಡಿದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಅತ್ಯುತ್ತಮ ಪ್ರತಿಭೆಗಳು ರೂಪುಗೊಳ್ಳಲು ಸಾಧ್ಯವಿದೆ.

ಈ ದಿಸೆಯಲ್ಲಿ ಮಕ್ಕಳಲ್ಲಿನ ಜಾನಪದ ಮತ್ತು ನೃತ್ಯ ಹಾಗೂ ನಟನಾ ಕಲೆಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಿ, ಅವರನ್ನು ಪ್ರತಿಭಾವಂತ ಕಲಾವಿದರನ್ನಾಗಿ ಮಾಡುವಲ್ಲಿ ಶಿಕ್ಷಕ ಮೋಹನ್ ಹೊಸ್ಮಾರು ಕಾರ್ಯತತ್ಪರತೆ ಮತ್ತು ಅರ್ಪಣಾ ಮನೋಭಾವ ಅನನ್ಯವಾದುದು.

ಮೋಹನ್ ಅವರು ಜಿಲ್ಲಾ, ರಾಜ್ಯ, ರಾಷ್ಟೆ ಮಟ್ಟದ ಜಾನಪದ ನೃತ್ಯ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು, ಸರ್ವ ಶಿಕ್ಷಣ ಅಭಿಯಾನದಡಿ ಸರಕಾರಿ ಶಾಲೆಗಳಲ್ಲಿ ನೃತ್ಯ ಶಿಕ್ಷಕನಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ತಕ್ಷಣವೇ ಗುರುತಿಸಬಲ್ಲವರಾಗಿದ್ದು, ನಮ್ಮ ಸಂಸ್ಕೃತಿ ಪರಂಪರೆಯ ಬೆಳವಣಿಗೆಗೆ ಜಾನಪದ ಪ್ರಕಾರಗಳು ಅತ್ಯಂತ ಅಗತ್ಯ ಎನ್ನುವ ಮನೋಭಾವ ಹೊಂದಿದ್ದಾರೆ. ಜಾನಪದ ನೃತ್ಯ ಪ್ರಕಾರದಲ್ಲಿ ವಿಶೇಷ ಪರಿಣತಿ ಪಡೆದ ಮೋಹನ್ ಅವರಿಂದ ತರಬೇತಿ ಪಡೆದ ಹಲವು ಮಕ್ಕಳು ಜಿಲ್ಲಾ ಮತ್ತು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

ದೇಶದಾದ್ಯಂತ ನಗರ ಸ್ವಚ್ಚತೆ ಪರಿಕಲ್ಪನೆಯಲ್ಲಿ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆ ಅಂಗವಾಗಿ ಮೂಡುಬಿದಿರೆ ಪುರಸಭೆ ವತಿಯಿಂದ ನಡೆದ ಬೀದಿ ನಾಟಕ ಸ್ಪರ್ಧೆಯಲ್ಲಿ ಮೋಹನ್ ನಿರ್ದೇಶನದ ನನ್ನ ಕಸ ನನ್ನ ಜವಾಬ್ದಾರಿ ಶೀರ್ಷಿಕೆಯ ಬೀದಿ ನಾಟಕ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅವರು ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ಜಾನದದ ನೃತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ತರಬೇತಿ ನೀಡುವ ಹಾಗೂ ಸ್ಪರ್ಧೆಗಳಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತಂತೆ ರಾಜ್ಯಾದ್ಯಂತ ಶಿಕ್ಷಕರಿಗೆ ಮಾಹಿತಿ ನೀಡಿರುವ, ನೀಡಿದ ಹೆಗ್ಗಳಿಗೆ ಇವರದ್ದು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಮತ್ತು ಡಿಪ್ಲೊಮಾ ಇನ್ ಎಜುಕೇಶನ್ ಶಿಕ್ಷಣವನ್ನು ಮಂಗಳೂರಿನ ಡಯೆಟ್ ವಿದ್ಯಾಸಂಸ್ಥೆಯಲ್ಲಿ ಪಡೆದಿರುವ ಮೋಹನ್ ಹೊಸ್ಮಾರು, ಕಳೆದ 12 ವರ್ಷದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಸಂಗೀತ, ಸಾಹಿತ್ಯ, ನೃತ್ಯ, ಯಕ್ಷಗಾನ, ನಾಟಕದಲ್ಲಿ ವಿಶೇಷ ಪರಿಣಿತಿ ಪಡೆದಿದ್ದು ಹಾಡು, ಕಥೆ ಹಾಗೂ ನಾಟಕದ ಮೂಲಕ ಸರಳ ಹಾಗೂ ಆಸಕ್ತಿದಾಯಕವಾಗಿ ಬೋಧಿಸುವ ಕೌಶಲ್ಯ ಹೊಂದಿದ್ದಾರೆ.

2010ರಿಂದ ಜಾನಪದ ನೃತ್ಯ ವಾಹಿನಿ ಕಲಾಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರು ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2011ರಲ್ಲಿ ತಮ್ಮ ಕಲಾ ಸೇವೆಯನ್ನು ಪ್ರಾರಂಭಿಸಿದ ಅವರು, 800ಕ್ಕೂ ಹೆಚ್ಚು ಬೀದಿ ನಾಟಕ ಪ್ರದರ್ಶನ ನೀಡಿದ್ದಾರೆ.

ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಯೋಜನೆಗಳಾದ ಚುನಾವಣಾ ಸಂದೇಶ, ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನ, ತಾಯಿ ಮಗು ಯೋಜನೆ, ಸಾಂಕ್ರಾಮಿಕ ರೋಗಗಳ ಜಾಗೃತಿ ಕಾರ್ಯಕ್ರಮ ಸೇರಿದಂತೆ ಹಲವು ಯೋಜನೆಗಳ ಕುರಿತು ಬೀದಿ ನಾಟಕ ಪ್ರದರ್ಶನ ಮಾಡಿದ್ದಾರೆ.

ಜಾನಪದ ನೃತ್ಯ ಪ್ರಕಾರದಲ್ಲಿ ಪ್ರಾವೀಣ್ಯತೆ ಹೊಂದಿರುವ ಅವರು ಉಡುಪಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಮೈಸೂರು ದಸರಾ, ಮೈಸೂರು ಜಾನಪದ ಉತ್ಸವ, ಕಾರವಾರ, ಹಾಸನ, ಮೂಡಿಗೆರೆ, ಬಳ್ಳಾರಿಯಲ್ಲಿ ನಡೆದ ಹಂಪಿ ಉತ್ಸವ ಹಾಗೂ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

ಪ್ರಸ್ತುತ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಮೋಹನ್ ನೇರ ನಡೆ ನುಡಿ, ಸರಳ ಜೀವನ ಮೈಗೂಡಿಸಿಕೊಂಡಿಸಿದ್ದಾರೆ.

ಸಂಘಟನಾ ಚಾತುರ್ಯ ಮತ್ತು ಉತ್ತಮ ವಾಗ್ಮಿಯಾಗಿರುವ ಅವರು, ಜಾನಪದ ಕಲೆಯ ಬೆಳವಣಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದು, ಅದನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಾ, ಮಕ್ಕಳಿಗೆ ಶಾಲೆಗಳಲ್ಲಿ ಪಠ್ಯ ಶಿಕ್ಷಣದೊಂದಿಗೆ ಕಲೆಯ ಬೆಳವಣಿಗೆಗೆ ಅಗತ್ಯ ಪ್ರೋತ್ಸಾಹ ದೊರೆಯಬೇಕು ಎಂಬ ಆಶಯ ಹೊಂದಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!