Thursday, July 7, 2022
Home ಲೋಕಾಭಿರಾಮ ಭಾವತರಂಗ ಸೌರ ಚಂಡಮಾರುತದಿಂದ ಭೂಮಿಗೆ ಅಪಾಯವಿಲ್ಲ

ಸೌರ ಚಂಡಮಾರುತದಿಂದ ಭೂಮಿಗೆ ಅಪಾಯವಿಲ್ಲ

ಉಡುಪಿ: ಸೌರ ಚಂಡಮಾರುತದಿಂದ ಭೂಮಿಗೆ ಅಪಾಯವಿಲ್ಲ ಎಂದು ಭೌತಶಾಸ್ತ್ರಜ್ಞ ಹಾಗೂ ಪಿಪಿಸಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ| ಎ. ಪಿ. ಭಟ್ ಹೇಳಿದ್ದಾರೆ.

ಸೂರ್ಯನ ಆವರ್ತಿತ ನರ್ತನ ಇದಾಗಿದ್ದು, ಪ್ರತೀ 11 ವರ್ಷಗಳಿಗೊಮ್ಮೆ ಹೀಗಾಗುತ್ತದೆ. ಅದರಿಂದಾಗಿ ಸುತ್ತಲೂ ಸೂರ್ಯನ ಶಕ್ತಿ ಚಿಮ್ಮುತ್ತದೆ. ಅದೇ ಸೌರ ಚಂಡಮಾರುತ. ಈ ಪ್ರಕ್ರಿಯೆ ಶತ, ಸಹಸ್ರಮಾನಗಳಿಂದಲೂ ನಡೆಯುತ್ತಿದೆ ಎಂದು ಡಾ| ಭಟ್ ವಿಶ್ಲೇಷಿಸಿದ್ದಾರೆ.

ಸೌರ ಚಂಡಮಾರುತ ಎಷ್ಟು ಶಕ್ತಿಯುತ?
2020ರಿಂದ ಪ್ರಾರಂಭವಾಗಿರುವ ಹನ್ನೊಂದು ವರ್ಷಗಳ ಈ ಹೊಸ ಆವರ್ತನೆಯಲ್ಲಿ ಈ ಸೌರ ಮಾರುತಗಳನ್ನು ಅತೀ ಹೆಚ್ಚಿನ ಶಕ್ತಿಯ ಎಕ್ಸ್ 1 ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಸೌರ ಮಾರುತಗಳ ಶಕ್ತಿಯನ್ನು ಎ, ಬಿ, ಸಿ, ಎಂ ಹಾಗೂ ಎಕ್ಸ್ ಎಂದು ವಿಂಗಡಿಸುತ್ತಾರೆ. ಎ ಕಡಿಮೆ ಶಕ್ತಿಯುಳ್ಳದ್ದಾಗಿದ್ದರೆ, ಎಕ್ಸ್ ಮಾರುತಗಳು ಅತೀ ಹೆಚ್ಚು ಶಕ್ತಿಯುತವಾದವುಗಳು.

2011ರಲ್ಲೂ ಈಗಿನಂತೆ ಶಕ್ತಿಯುತ ಮಾರುತ ಅಪ್ಪಳಿಸಿತ್ತು. ಪ್ರತೀ 11 ವರ್ಷಗಳ ಆವರ್ತನೆಯಲ್ಲಿ ಕೆಲವು ದಿನಗಳಲ್ಲಿ ಈಗಿನ ಮಟ್ಟದ ಅತೀ ಹೆಚ್ಚಿನ ಶಕ್ತಿ ಉತ್ಸರ್ಜನೆಯನ್ನು ಕಾಣಬಹುದು. ಇದೇನೂ ಹೊಸತಲ್ಲ ಎಂದು ಡಾ| ಎ. ಪಿ. ಭಟ್ ವಿವರಿಸಿದ್ದಾರೆ.

2019ರಲ್ಲಿ ಸೂರ್ಯನ ಕಲೆಗಳು ಕಡಿಮೆ ಇತ್ತು. ಈ ಕಲೆಗಳು ದೊಡ್ಡದಾಗಿ ಕಂಡಾಗ, ಅಲ್ಲಿಂದ ವಿಶೇಷ ಶಕ್ತಿ ಮಾರುತಗಳು ಭೂಮಿಗೂ ಅಪ್ಪಳಿಸುವುದುಂಟು. ಕಳೆದ ಜು. 3ರಂದು ಈ ರೀತಿಯ ಪ್ರಕ್ರಿಯೆ ವಿಜ್ಞಾನಿಗಳ ಗಮನಕ್ಕೆ ಬಂದಿದ್ದು, ಇದೊಂದು ಪ್ರಬಲ ಸೌರ ಚಂಡಮಾರುತವಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದರು.

ಭೂಮಿಗೆ ಅಪಾಯವಿಲ್ಲ
ಭೂಮಿ ಈ ರೀತಿಯ ಹೊಡೆತಗಳನ್ನು ಪ್ರಾರಂಭದಿಂದಲೂ ಸಹಿಸಿಕೊಂಡು ಬಂದಿದೆ. ಭೂಮಿಯ ಸುತ್ತ ಇರುವ ಭೂ ಅಯಾನುಗಳ ಕವಚ (ವಾನ್ ಅಲೆನ್ ಬೆಲ್ಟ್)ಗಳು ಸೂರ್ಯ ಮಾರುತಗಳಿಗೆ ನೇರ ನುಗ್ಗಲು ಅವಕಾಶ ಕೊಡುವುದಿಲ್ಲ. ಭೂಮಿಯ ಸುತ್ತ ಸುಮಾರು 5 ಸಾವಿರ ಹಾಗೂ 15 ಸಾವಿರ ಕಿ. ಮೀ. ದೂರದಲ್ಲಿ ಕಾಂತ ಕ್ಷೇತ್ರದಂತೆ ಈ ಕವಚಗಳು ಸುತ್ತಿಕೊಂಡಿವೆ. ಅವು ಸಮಭಾಜಕ ವೃತ್ತದ ಸುತ್ತ ಉಬ್ಬಿ, ಧ್ರುವ ಪ್ರದೇಶಗಳಲ್ಲಿ ಕಂತಿವೆ. ಹಾಗಾಗಿ ಈ ಸೌರ ಮಾರುತಗಳು ಭೂಮಿಯ ಧ್ರುವ ಪ್ರದೇಶದಲ್ಲಿ ಹೆಚ್ಚು ಅಪ್ಪಳಿಸುತ್ತವೆ.

ಯಾರಿಗೆ ತೊಂದರೆ?
ಸೌರ ಚಂಡಮಾರುತದಿಂದ ಆಕಾಶದಲ್ಲಿರುವ ಗಗನ ಯಾತ್ರಿಗಳು, ಎಲ್ಲ ಕೃತಕ ಉಪಗ್ರಹಗಳಿಗೆ ಈ ಶಕ್ತಿಯುತ ಮಾರುತ ತೊಂದರೆ ಕೊಡುತ್ತವೆ. ಸೌರ ಮಾರುತದ ವಿದ್ಯುತ್ ಕಾಂತೀಯ ಶಕ್ತಿಯುತ ಕಣಗಳು, ಕೃತಕ ಉಪಗ್ರಹಗಳ ಇಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಪ್ರಭಾವ ಬೀರಬಹುದು. ಭೂಮಿ ತನ್ನ ಸುತ್ತಲಿನ ಎಲ್ಲ ಜೀವಿಗಳನ್ನು ಈ ಮಾರುತದಿಂದ ರಕ್ಷಿಸಿದರೂ ಮಾನವ ನಿರ್ಮಿತ, ಆಕಾಶದಲ್ಲಿರುವ ಆಧುನಿಕ ತಂತ್ರಜ್ಞಾನಗಳು ಕೆಲ ಕ್ಷಣಗಳ ಮಟ್ಟಿಗೆ ತೊಂದರೆಗೀಡಾಗಬಹುದು ಎಂದು ಡಾ| ಭಟ್ ತಿಳಿಸಿದ್ದಾರೆ.

ಅದ್ಭುತ ಧ್ರುವ ಪ್ರಭೆ!
ಈ ಮಾರುತಗಳ ಅಬ್ಬರದ ಕಾಲದಲ್ಲಿ ಉತ್ತರ ಹಾಗೂ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಅತೀ ಸುಂದರ ಪ್ರಭೆ ಕಾಣಲಿದೆ. ಆ ಪ್ರದೇಶಗಳಲ್ಲಿ ಭೂಮಿಯ ವಾತಾವರಣದ ಒಳ ನುಸುಳಿದ ಮಾರುತ ಕಣಗಳು ವಾತಾವರಣದ ಕಣಗಳೊಂದಿಗೆ ಘರ್ಷಿಸಿ ಕಣ್ಣಿಗೆ ಕಾಣುವ ಬಣ್ಣ ಬಣ್ಣದ ಬೆಳಕು ಬಿಡುಗಡೆ ಮಾಡುತ್ತವೆ. ಅದು ಇಡೀ ಉತ್ತರ ಆಕಾಶದಲ್ಲಿ ಕೆಲವು ನಿಮಿಷಗಳ ಸುಂದರ ನೋಟ ಬೀರುತ್ತವೆ ಎಂದಿರುವ ಡಾ| ಭಟ್, ಅಷ್ಟಕ್ಕೂ ಸೂರ್ಯ ಇನ್ನೂ ನಮಗೆ ಅರ್ಥವಾಗಿಲ್ಲ, ವಿಜ್ಞಾನಿಗಳಿಗೆ ಕೂಡಾ ಎಂದಿದ್ದಾರೆ!

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!