Monday, July 4, 2022
Home ಲೋಕಾಭಿರಾಮ ಭಾವತರಂಗ ಮರೆಯಾಗದ, ಮರೆಯಲಾಗದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು

ಮರೆಯಾಗದ, ಮರೆಯಲಾಗದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು

ಸುದ್ದಿಕಿರಣ ವರದಿ
ಬುಧವಾರ, ಜೂನ್ 8

ಇಂದು ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಜನ್ಮದಿನ. ತನ್ನಿಮಿತ್ತ ಈ ಲೇಖನ.

ಮರೆಯಾಗದವರು, ಮರೆಯಲಾಗದವರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು
ಜೂನ್ ತಿಂಗಳ ಮೊದಲ ವಾರದಲ್ಲಿ ಶಾಲೆಗಳು ಆರಂಭವಾಗುತ್ತಿದ್ದಂತೆ ಉಡುಪಿಯ ಶೀರೂರು ಮಠದ ಸುತ್ತೆಲ್ಲಾ ನೂರಾರು ಚಿಣ್ಣರು, ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ದಂಡು.

ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು ಅನುಗ್ರಹಿಸಿ ನೀಡುತ್ತಿದ್ದ ಪಠ್ಯಪುಸ್ತಕ, ಸಮವಸ್ತ್ರ, ಸ್ಕೂಲ್ ಬ್ಯಾಗ್, ವಿದ್ಯಾರ್ಥಿ ವೇತನಗಳನ್ನು ಖುಷಿಯಿಂದ ಪಡೆಯುತ್ತಿದ್ದ ನೂರಾರು ಮುಗ್ದ ಹೃದಯಗಳು ನಿರಾಳ ಮನಸ್ಸಿನಿಂದ ಶಾಲೆಗೆ ಹೆಜ್ಜೆ ಹಾಕುತ್ತಿದ್ದವು.

ಒಂದು ಕಾಲದಲ್ಲಿ ಉಡುಪಿಯ ಕೃಷ್ಣ ಜಯಂತಿ ಸಂದರ್ಭದ ಪ್ರಮುಖ ಆಕರ್ಷಣೆಗಳಾದ ಹುಲಿವೇಷ ಸೇರಿದಂತೆ ವೈವಿಧ್ಯಮಯ ಜಾನಪದ ಸಂಸ್ಕೃತಿಯನ್ನು ಸಾರುವ ವೇಷ ಭೂಷಣಗಳು ನಶಿಸಿಹೋಗುವ ಸಂದರ್ಭದಲ್ಲಿ ಮತ್ತೆ ಆಸರೆ ನೀಡಿ ಪ್ರೋತ್ಸಾಹಿಸಿದವರು ಶ್ರೀಪಾದರು.

ಕೃಷ್ಣನ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡುವ ಹುಲಿವೇಷ ಹಾಗೂ ಬಗೆಬಗೆಯ ಸಾಂಸ್ಕೃತಿಕ ಭೂಷಣಗಳಿಗೆ ಬೃಹತ್ ವೇದಿಕೆ, ಉತ್ಕೃಷ್ಟ ಗುಣಮಟ್ಟದ ಹಿನ್ನೆಲೆ ಸಂಗೀತ, ಗಣ್ಯರ ಉಪಸ್ಥಿತಿ, ದೂರದರ್ಶನದಲ್ಲಿ ನೇರಪ್ರಸಾರ, ಆಕರ್ಷಕ ನಗದು, ಪಾರಿತೋಷಕ, ಅಭಿನಂದನೆಗಳನ್ನು ಆಯೋಜಿಸಿದವರು .ಶ್ರೀಪಾದರ ಕಲಾಭಿಮಾನ ಕಲಾಪ್ರೇಮಿಗಳನ್ನು, ಕಲಾವಿದರನ್ನು ಮತ್ತಷ್ಟು ಕಲೆಯತ್ತ ಪ್ರೋತ್ಸಾಹ ನೀಡುವಲ್ಲಿ ಹೆಚ್ಚು ಪಾತ್ರ ವಹಿಸಿದಲ್ಲದೇ, ಧನ್ಯರನ್ನಾಗಿಸಿತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಕೃಷ್ಣನನ್ನು ನಿತ್ಯ ಪೂಜಿಸುವ ಯತಿಗಳ ದಿವ್ಯಹಸ್ತದಿಂದ ಪ್ರತೀ ವೇಷಧಾರಿಗಳಿಗೆ ಹೃತ್ಪೂರ್ವಕವಾಗಿ ಅರ್ಪಿಸಲ್ಪಡುತ್ತಿದ್ದ ಸಾವಿರಾರು ರೂಪಾಯಿ ಬೆಲೆಯ ನೋಟುಗಳ ಹಾರಾರ್ಪಣೆಯಿಂದ ವೇಷಧಾರಿಗಳ ಮನಸ್ಸು ತುಂಬಿಬರುತ್ತಿತ್ತು. ಬಹುತೇಕರು ಶ್ರೀಪಾದರ ಸ್ಪರ್ಶದಿಂದ ಭಾವುಕರಾಗುತ್ತಿದ್ದರು.

ವಿಠಲಪಿಂಡಿಯಂದು ಕೃಷ್ಣನ ಉತ್ಸವ 4 ಗಂಟೆಗೆ ಮುಗಿಯುತ್ತಿದ್ದಂತೆ ಜನಸ್ತೋಮ ಶೀರೂರು ಶ್ರೀಪಾದರ ಅನ್ನವಿಠಲ ವೇದಿಕೆಯತ್ತ ಮುನ್ನುಗ್ಗುತ್ತಿತ್ತು.

ಸತತ 25 ವರ್ಷಗಳಿಂದ ಕೃಷ್ಣ ಜಯಂತಿ ಸಂದರ್ಭದಲ್ಲಿ ಬಹುವೈಭವದಿಂದ ಆಯೋಜನೆಗೊಳ್ಳುತ್ತಿದ್ದ ಈ ಉತ್ಸಾಹದ ಉತ್ಸವ ಇಂದು ಮರೆಯಾಗಿದೆ.

ನೂರಾರು ವೇಷಧಾರಿಗಳು, ಕಲಾವಿದರು, ಕಲಾ ಪ್ರೇಮಿಗಳಿಗೆ ಶ್ರೀಪಾದರ ಅಗಲಿಕೆ ತುಂಬಲಾರದ ನೋವನ್ನುಂಟುಮಾಡುತ್ತಿದೆ.

ಪ್ರತೀ ತಿಂಗಳು ಅನಾರೋಗ್ಯ ಪೀಡಿತರಿಗೆ ಶಿರೂರು ಶ್ರೀಗಳು ಹರಸಿ ನೀಡುತ್ತಿದ್ದ ಆರೋಗ್ಯ ನಿಧಿ ಸಾವಿರಾರು ರೋಗಿಗಳ ಬದುಕಿಗೆ ಸಂಜೀವಿನಿಯಾಗಿತ್ತು. ಇಂದು ಆ ಸೇವೆ, ಸಹಾಯ, ಆಸರೆ ಎಲ್ಲವೂ ದೂರವಾಗಿದೆ.

ಅಶಕ್ತರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಪ್ರಶಸ್ತಿ ಪುರಸ್ಕೃತರು, ಸಾಧಕರು, ಮಠ ಮಂದಿರಗಳು, ಸಂಘಸಂಸ್ಥೆಗಳಿಗೆ ಶ್ರೀಪಾದರಿಂದ ಸದಾ ಏನಾದರೊಂದು ಕೊಡುಗೆ ಸಲ್ಲುತ್ತಲೇ ಇರುತ್ತಿತ್ತು .ಈಗ ಇವೆಲ್ಲವೂ ನೆನಪು ಮಾತ್ರ.

ಒಂದಂತೂ ಸತ್ಯ. ಭಗವಂತನ ಪೂಜೆ ಪುರಸ್ಕಾರಗಳ ಜೊತೆಗೆ ಜನ ಸೇವೆಯಲ್ಲೂ ಸಂತಸ ಕಾಣುತ್ತಿದ್ದ ಶ್ರೀಪಾದರು ಬಡವ ಬಲ್ಲಿದನೆಂಬ ಭೇದವಿಲ್ಲದೆ ಜಾತಿ ಮತ ಮೀರಿ ನಿಂತಿದ್ದ ಅಪೂರ್ವ ಶಕ್ತಿಯಾಗಿದ್ದರು.

ನಿಃಸಂಶಯವಾಗಿ ಶೀರೂರು ಶ್ರೀಪಾದರು ಬಡವರ ಬಂಧು ಹಾಗೂ ಪ್ರೀತಿ ಪ್ರೇಮ ಸಮಾನತೆಯ ಪ್ರತೀಕವಾಗಿದ್ದರು. ಅವರ ಸೇವೆ, ಸಾಧನೆ, ಶುದ್ಧ ಮನಸ್ಸು ಅನರ್ಘ್ಯ ರತ್ನದಂತೆ ನಿರಂತರ ಮಿನುಗುತ್ತಿರುತ್ತದೆ.

ಅವರು ಎಂದಿಗೂ, ಎಂದೆಂದಿಗೂ ಜನ ಮಾನಸದಿಂದ ಮರೆಯಾಗದವರು, ಮರೆಯಲಾಗದವರು. ಸದಾ ನಮ್ಮೊಡನೆಯೇ ಇರುವವರು.

ಅಂದಹಾಗೆ ಇಂದು ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಜನ್ಮದಿನ. ಅವರ ಕೃಪೆ ಆಶೀರ್ವಾದ ಸರ್ವರಿಗೂ ಲಭಿಸಲಿ ಎನ್ನುವುದೇ ಆಶಯ.

 

ಇಂದು ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಜನ್ಮದಿನ. ತನ್ನಿಮಿತ್ತ ಈ ಲೇಖನ.

ಮರೆಯಾಗದ,ಮರೆಯಲಾಗದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು

 

 

 

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!