Monday, July 4, 2022
Home ಲೋಕಾಭಿರಾಮ ಬೋಳಂತಕೋಡಿ ಪ್ರಶಸ್ತಿಗೆ ಆಯ್ಕೆ

ಬೋಳಂತಕೋಡಿ ಪ್ರಶಸ್ತಿಗೆ ಆಯ್ಕೆ

ಪುತ್ತೂರು: ಸಾಹಿತಿ ಡಾ. ನಾ. ಮೊಗಸಾಲೆ ಪ್ರಸಕ್ತ ಸಾಲಿನ ‘ಬೋಳಂತಕೋಡಿ ಕನ್ನಡ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಈ ತಿಂಗಳ 13ರಂದು ಕಾಂತಾವರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಬೋಳಂತಕೋಡಿ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.

ದಿ. ಬೋಳಂತಕೋಡಿ ಈಶ್ವರ ಭಟ್ಟ ಅವರು ಪುತ್ತೂರು ಕರ್ನಾಟಕ ಸಂಘಕ್ಕೆ ಹೊಸ ಆಯಾಮ ನೀಡಿದವರು. ಪ್ರಕಾಶನ, ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಪುತ್ತೂರಿನಲ್ಲಿ ಅಕ್ಷರ ಪರಿಚಾರಿಕೆ ಮಾಡಿದವರು.

ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಈಗಾಗಲೇ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್, ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್, ಕು. ಗೋ. ಉಡುಪಿ, ಬಿ. ಶ್ರೀನಿವಾಸ ರಾವ್- ಸಾವಿತ್ರೀ ಎಸ್. ರಾವ್ ಮತ್ತು ಅಂಬಾತನಯ ಮುದ್ರಾಡಿ ಅವರಿಗೆ ನೀಡಲಾಗಿದೆ.

ಪ್ರಶಸ್ತಿ ಪುರಸ್ಕೃತರ ಪರಿಚಯ
ಕಾಂತಾವರದಲ್ಲಿ ಅಕ್ಷರ ಕ್ರಾಂತಿಯನ್ನೇ ಮಾಡಿರುವ ಡಾ. ನಾ. ಮೊಗಸಾಲೆ ಅವರಿಗೀಗ 76ರ ಹರೆಯ. ಮಾತು ಮತ್ತು ಕೃತಿಗಳ ಪ್ರಕಟಣೆ ಮೂಲಕ ಕರ್ನಾಟಕವೇ ಹೆಮ್ಮೆಪಡುವ ಕಾರ್ಯ ಮಾಡಿದ್ದಾರೆ. ಕಾಂತಾವರ ಕನ್ನಡ ಸಂಘ, ಅಲ್ಲಮ ಪ್ರಭು ಪೀಠ, ಮುದ್ದಣ ಕಾವ್ಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ನಾಡಿಗೆ ನಮಸ್ಕಾರ ಸರಣಿ ಪ್ರಕಟಣೆಗಳ ನೇತೃತ್ವ ಮೊಗಸಾಲೆಯವರದು. ಕಾದಂಬರಿ, ಕಥಾ ಸಂಕಲನ, ಲೇಖನಗಳು, ವೈದ್ಯಕೀಯ ಕೃತಿಗಳು, ಸಂಪಾದನಾ ಕೃತಿಗಳು, ಬಯಲು ಬೆಟ್ಟ ಎಂಬ ಆತ್ಮಕಥನ ಬರೆದಿದ್ದಾರೆ.

ಅವರ ತೊಟ್ಟಿ ಕಾದಂಬರಿ ತೆಲುಗಿಗೆ, ದೃಷ್ಟಿ ಮತ್ತು ಉಲ್ಲಂಘನೆ ಕಾದಂಬರಿ ತೆಲುಗು, ಮರಾಠಿ ಮತ್ತು ಇಂಗ್ಲಿಷಿಗೆ ಹಾಗೂ ನನ್ನದಲ್ಲದ್ದು ಮಲೆಯಾಳಕ್ಕೆ ಅನುವಾದಗೊಂಡಿದೆ. ಮೊಗಸಾಲೆ 50 ಮತ್ತು ಆಯಸ್ಕಾಂತಾವರ ಮೊಗಸಾಲೆಯವರಿಗೆ ಸಲ್ಲಲ್ಪಟ್ಟ ಅಭಿನಂದನ ಕೃತಿಗಳು.
ಮೂರು ಬಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಕುವೆಂಪು ಪ್ರಶಸ್ತಿ…. ಹೀಗೆ ಹಲವಾರು ಗೌರವಗಳಿಂದ ಪುರಸ್ಕೃತರಾಗಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!