Monday, July 4, 2022
Home ಲೋಕಾಭಿರಾಮ ಆರೋಗ್ಯ ಕೋವಿಡ್ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ

ಕೋವಿಡ್ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ

ಸುದ್ದಿಕಿರಣ ವರದಿ
ಸೋಮವಾರ, ಜೂನ್ 13

ಕೋವಿಡ್ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಲ್ಲಿ ಅದನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್ 19, ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳ ಪ್ರಸಕ್ತ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹರಡದಂತೆ ಎಚ್ಚರ ವಹಿಸಿ
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಕಂಡುಬಂದಲ್ಲಿ ಆ ಪ್ರದೇಶದಲ್ಲಿ ಹೆಚ್ಚಿನ ಟೆಸ್ಟಿಂಗ್ ಮತ್ತು ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯವನ್ನು ತಕ್ಷಣ ಕೈಗೊಂಡು, ಅದು ಇತರರಿಗೆ ಹರಡದಂತೆ ಎಚ್ಚರವಹಿಸಿ.

ಎಲ್ಲಾ ತಾಲೂಕುಗಳ ಕೋವಿಡ್ ಕಾರ್ಯಪಡೆಗಳನ್ನು ಮತ್ತೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಜಿಲ್ಲೆಯಾದ್ಯಂತ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿನ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳು, ಆಮ್ಲಜನಕ ತಯಾರಿಕೆ ಮತ್ತು ಶೇಖರಣಾ ಘಟಕ ಸೇರಿದಂತೆ ಎಲ್ಲಾ ವೈದ್ಯಕೀಯ ಪರಿಕರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಸೂಚಿಸಿದರು.

ಲಸಿಕೆ ನೀಡಿ
ಪ್ರಸ್ತುತ ಶಾಲಾ ಕಾಲೇಜುಗಳು ಆರಂಭಗೊಳ್ಳುತ್ತಿದ್ದು, ಜಿಲ್ಲೆಗೆ ಹೊರ ರಾಜ್ಯ ಮತ್ತು ಹೊರ ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಅವರ ಮೂಲಕ ಕೋವಿಡ್ ಪ್ರಕರಣ ಹರಡದಂತೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಕೋವಿಡ್ ಮುನ್ನೆಚ್ಚರಿಕೆ ಲಸಿಕೆ ಪಡೆಯುವ ಕುರಿತಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೂಲಕ ಸೂಚನೆ ನೀಡುವಂತೆ ಹಾಗೂ ಮುನ್ನೆಚ್ಚರಿಕೆ ಡೋಸ್ ಪಡೆಯಲು ಬಾಕಿ ಇರುವ 60 ವರ್ಷಕ್ಕೂ ಮೇಲ್ಪಟ್ಟವರನ್ನು ಗುರುತಿಸಿ ಲಸಿಕೆ ನೀಡುವಂತೆ ಹಾಗೂ ಕೋವಿಡ್ ಲಸಿಕಾ ಮೇಳ ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡುವಂತೆ ನಿರ್ದೇಶನ ನೀಡಿದರು.

17 ಪಾಸಿಟಿವ್ ಪ್ರಕರಣ
ಜಿಲ್ಲೆಯಲ್ಲಿ ಕಳೆದ 10 ದಿನದಲ್ಲಿ 2,127 ಕೋವಿಡ್ ಪರೀಕ್ಷೆ ನಡೆಸಿದ್ದು, 17 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಪಾಸಿಟಿವಿಟಿ ದರ 0.80ರಷ್ಟಿದ್ದು, ಯಾವುದೇ ಸಾವು ಸಂಭವಿಸಿಲ್ಲ.

ಜಿಲ್ಲೆಯಲ್ಲಿ ಪ್ರಸ್ತುತ 11 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮಾಹಿತಿ ನೀಡಿದರು.

ಜಾಗೃತಿ ಮೂಡಿಸಿ
ಮಳೆಗಾಲದಲ್ಲಿ ಕಂಡು ಬರುವ ಡೆಂಗ್ಯೂ ಮತ್ತು ಮಲೇರಿಯಾ ನಿಯಂತ್ರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಆಯೋಜಿಸಿ ಹಾಗೂ ಸಾರ್ವಜನಿಕರ ಮೊಬೈಲ್ ಗಳಿಗೆ ಜಾಗೃತಿ ಕುರಿತ ಆಡಿಯೊ ಸಂದೇಶ ಕಳುಹಿಸಲು ಕ್ರಮ ಕೈಗೊಳ್ಳಿ ಮತ್ತು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾರ್ವಜನಿಕ ಜಾಥಾ ಏರ್ಪಡಿಸುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ನಿಯಂತ್ರಣ ಕುರಿತಂತೆ ಈಗಾಗಲೇ ಜಾಗೃತಿ ಮೂಡಿಸಲು ಪಿ.ಡಿ.ಓ.ಗಳಿಗೆ ಸೂಚನೆ ನೀಡಲಾಗಿದ್ದು, ಶಾಲಾ ವಿದ್ಯಾರ್ಥಿಗಳ ಮೂಲಕ ಮನೆ ಮನೆಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಹೇಳಿದರು.

ಸಭೆಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಮಧುಸೂದನ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ ಭಟ್ ಹಾಗೂ ಆರೋಗ್ಯ ಇಲಾಖೆಯ ವಿವಿಧ ಅನುಷ್ಠಾನಾಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!