Thursday, July 7, 2022
Home ಲೋಕಾಭಿರಾಮ ವಿಶ್ವಪ್ರಭಾ ಪ್ರಶಸ್ತಿಗೆ ಡಾ. ಮೋಹನ ಆಳ್ವ ಆಯ್ಕೆ

ವಿಶ್ವಪ್ರಭಾ ಪ್ರಶಸ್ತಿಗೆ ಡಾ. ಮೋಹನ ಆಳ್ವ ಆಯ್ಕೆ

ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನೀಡುವ ವಿಶ್ವಪ್ರಭಾ ಚೊಚ್ಚಲ ಪ್ರಶಸ್ತಿಗೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಕಲಾಪೋಷಕ, ಸಂಘಟಕ, ಕಲಾವಿದ ಡಾ. ಮೋಹನ ಆಳ್ವ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 1 ಲಕ್ಷ ರೂ. ನಗದು, ಪ್ರಶಸ್ತಿಪತ್ರ ಹಾಗೂ ಸನ್ಮಾನವನ್ನೊಳಗೊಂಡಿದೆ ಎಂದು ಪ್ರತಿಷ್ಠಾನ ಉಪಾಧ್ಯಕ್ಷ ಹಾಗೂ ಪ್ರಶಸ್ತಿ ಸಮಿತಿ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಏ. 3 ಮತ್ತು 4ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯುವ ಪ್ರತಿಷ್ಠಾನದ ಕಾರ್ಯಕ್ರಮ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಂದ ಉದ್ಘಾಟನೆಗೊಂಡ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಸಾಹಿತ್ಯ ಸಂಗೀತ ಚಿತ್ರಕಲೆ, ಸಾಕ್ಷ್ಯಚಿತ್ರ, ನಾಟಕ, ನೃತ್ಯ, ಲಲಿತಕಲೆ ಹೀಗೆ ಯುವಪೀಳಿಗೆಯಲ್ಲಿ ಸೌಂದರ್ಯ ಪ್ರಜ್ಞೆ ಮೂಡಿಸಿ, ಅರಳಿಸಲು ಅನೇಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ಚಟುವಟಿಕೆ ನಡೆಸುತ್ತಾ ಬಂದಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಸಂಸ್ಥೆ, ಸೀಮಿತ ಅವಧಿಯಲ್ಲೇ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ಆಯೋಜಿಸಿದ್ದ ನವರಸ ಮಾಲಿಕೆ, ಕಥಾ ಸಪ್ತಾಹ, ಸಾಕ್ಷ್ಯಚಿತ್ರಗಳು ಸುಮಾರು 5 ಲಕ್ಷಕ್ಕೂ ಅಧಿಕ ದೇಶ ವಿದೇಶದ ವೀಕ್ಷಕರನ್ನು ತಲುಪಿದೆ.

ಜೊತೆಗೆ ಜಾನಪದ ಉತ್ಸವ, ಏಕವ್ಯಕ್ತಿ ನಾಟಕ, ಬಡವರಿಗೆ ನೆರವು, ಮಲಬಾರ್ ವಿಶ್ವರಂಗ ಪುರಸ್ಕಾರ, ಸಾಮಾಜಿಕ ಅರಿವು ಮೂಡಿಸುವ ಬೀದಿ ನಾಟಕ, ಪುಸ್ತಕ ಬಿಡುಗಡೆ ಇತ್ಯಾದಿ ಬಹುಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದು ಹೆಬ್ಬಾರ್ ವಿವರಿಸಿದರು.

ಈ ವರ್ಷದಿಂದ ಸಂಸ್ಥೆಯ ಸ್ಥಾಪಕ ಹಾಗೂ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಮತ್ತವರ ಪತ್ನಿ ಪ್ರಭಾವತಿ ಶೆಣೈ ಹೆಸರಿನಲ್ಲಿ `ವಿಶ್ವಪ್ರಭಾ’ ಪುರಸ್ಕಾರವನ್ನು ಕನ್ನಡ ನಾಡು ನುಡಿ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಮಹನೀಯರಿಗೆ ನೀಡಲುದ್ದೇಶಿಸಿದ್ದು, ಮೊದಲ ಪ್ರಶಸ್ತಿ ಡಾ. ಮೋಹನ ಆಳ್ವ ಅವರಿಗೆ ನೀಡಲಾಗುವುದು. ಈ ಕಾರ್ಯ ನಿರಂತರವಾಗಿ ಮುಂದುವರಿಯಲು ಪೂರಕವಾಗಿ ವಿಶ್ವನಾಥ ಶೆಣೈ ದತ್ತಿನಿಧಿ ಸ್ಥಾಪಿಸುವರು ಎಂದು ಪ್ರತಿಷ್ಠಾನದ ಸಂಚಾಲಕ ರವಿರಾಜ ಎಚ್. ಪಿ. ತಿಳಿಸಿದರು.

ಪ್ರತಿಷ್ಠಾನ ಗೌರವಾಧ್ಯಕ್ಷ ಹಾಗೂ ಪುರಸ್ಕಾರ ಪ್ರಾಯೋಜಕ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಉಪಾಧ್ಯಕ್ಷೆ ಸಂಧ್ಯಾ ಶೆಣೈ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!