Wednesday, July 6, 2022
Home ಲೋಕಾಭಿರಾಮ ಆರಂಬ ಹಡಿಲು ಭೂಮಿ ಕೃಷಿ ಮೂಲಕ ಕೃಷಿಕರಲ್ಲಿ ನವಚೈತನ್ಯ

ಹಡಿಲು ಭೂಮಿ ಕೃಷಿ ಮೂಲಕ ಕೃಷಿಕರಲ್ಲಿ ನವಚೈತನ್ಯ

ಬ್ರಹ್ಮಾವರ, ಜು. 10, (ಸುದ್ದಿಕಿರಣ ವರದಿ): ಕೃಷಿ ಕಾರ್ಮಿಕರ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಫಲವತ್ತತೆಯ ಕೃಷಿ ಭೂಮಿ ಕೃಷಿ ಇಲ್ಲದೆ ಹಡಿಲು ಬಿದ್ದಿದ್ದು, ಅಂಥ ಭೂಮಿಗಳಲ್ಲಿ ಕೃಷಿ ಮಾಡುವ ಹಡಿಲು ಭೂಮಿ ಕೃಷಿ ಆಂದೋಲನದ ಮೂಲಕ ಶಾಸಕ ರಘುಪತಿ ಭಟ್ ಕೃಷಿಕರಲ್ಲಿ ನವಚೈತನ್ಯ ಮೂಡಿಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 25 ಎಕರೆ ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡಲಾಗುತ್ತಿದ್ದು, ಶನಿವಾರ ಚೇರ್ಕಾಡಿ ಗ್ರಾಮದ ಸೂರೆಬೆಟ್ಟು ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು

ಕೇದಾರೋತ್ಥಾನ ಟ್ರಸ್ಟ್ ಮೂಲಕ ಕೃಷಿ ಮಾಡಲು ಯಂತ್ರೋಪಕರಣ ಸೇರಿದಂತೆ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸುವ ಜೊತೆಯಲ್ಲಿ ಟ್ರಸ್ಟ್ ಮೂಲಕವೇ ಸಾವಿರಾರು ಎಕರೆ ಹಡಿಲು ಭೂಮಿ, ಅದರಲ್ಲೂ ಸಾವಯವ ಕೃಷಿ ಮಾಡಿರುವುದು ಶ್ಲಾಘನೀಯ. ಅದರಿಂದ ಭತ್ತದ ಉತ್ಪಾದನೆ ಹೆಚ್ಚುತ್ತದೆ ಹಾಗೂ ಸ್ಥಳೀಯರಿಗೆ ಉದ್ಯೋಗವೂ ಲಭಿಸುತ್ತದೆ ಎಂದರು. ಮುಂದಿನ ಬಾರಿ ಭೂಮಿಯ ಮಾಲಕರೇ ಕೃಷಿ ಮಾಡಬೇಕು ಎಂದೂ ಸಲಹೆ ನೀಡಿದರು.

ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಭಟ್, ಉಪಾಧ್ಯಕ್ಷ ಕಿಟ್ಟಪ್ಪ ಅಮೀನ್, ಸದಸ್ಯರಾದ ಕಮಲಾಕ್ಷ ಹೆಬ್ಬಾರ್, ಚೇರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಹಿರಿಯ ಕೃಷಿಕ ಶಿವರಾಮ ಶೆಟ್ಟಿ, ಅರ್ಚಕ ಜಯರಾಮ ಸೂರ್ಯ, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ಪಕ್ಷ ಪ್ರಮುಖರಾದ ಧನಂಜಯ ಅಮೀನ್, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಬಿರ್ತಿ ರಾಜೇಶ್ ಶೆಟ್ಟಿ, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿ ಶಂಕರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!