Saturday, August 13, 2022
Home ಲೋಕಾಭಿರಾಮ ಆರೋಗ್ಯ ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ತಾಯಿ, ಮಗುವಿನ ಆರೋಗ್ಯ ವೃದ್ಧಿ

ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ತಾಯಿ, ಮಗುವಿನ ಆರೋಗ್ಯ ವೃದ್ಧಿ

ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ತಾಯಿ, ಮಗುವಿನ ಆರೋಗ್ಯ ವೃದ್ಧಿ
(ಸುದ್ದಿಕಿರಣ ವರದಿ)

ಶಿರ್ವ: ಸೊಪ್ಪು ತರಕಾರಿಗಳು, ಮೊಳಕೆ ಬರಿಸಿದ ಕಾಳುಗಳು, ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆಯಲ್ಲಿ ಅಧಿಕ ಪೋಷಕಾಂಶಗಳಿದ್ದು, ಅದರ ಕ್ರಮಬದ್ಧ ಸೇವನೆ ಅಗತ್ಯ. ಕೊಬ್ಬರಿ ಎಣ್ಣೆ ಅತ್ಯಂತ ಉತ್ತಮ ಕೊಬ್ಬಿನಾಂಶ ನೀಡುವ ಪದಾರ್ಥವಾಗಿದೆ.

ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ತಾಯಿ- ಮಗುವಿನ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ. ಗಾಯತ್ರಿ ಸಂತೋಷ್ ಹೇಳಿದರು.

ಪಡುಬೆಳ್ಳೆ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಗ್ರಾಮ ಪಂಚಾಯತ್ ಮೂಡುಬೆಳ್ಳೆ ವಾರ್ಡ್ 4 ಮತ್ತು 5 ಪೋಷಣ್ ಅಭಿಯಾನ ಮಾಸಾಚರಣೆ ಪ್ರಯುಕ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಆರೋಗ್ಯ ಹಾಗೂ ಕೋವಿಡ್ ಲಸಿಕೆ ಮಾಹಿತಿ ನೀಡಿದರು.

ಹಿರಿಯ ಪತ್ರಕರ್ತ ಬಿ. ಪುಂಡಲೀಕ ಮರಾಠೆ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಹಿರಿಯರು ಶ್ರಮದಾಯಕ ಕೆಲಸದ ಜೊತೆಗೆ ಕಾಲ ಕಾಲಕ್ಕೆ ಬೆಳೆಯುವ ಪ್ರಕೃತಿ ದತ್ತ ಆಹಾರ ಸೇವಿಸಿ ಆರೋಗ್ಯ ಪೂರ್ಣ ಜೀವನ ನಡೆಸಿ ಧೀರ್ಘಾಯುಷಿಗಳಾಗಿ ಬಾಳಿದ್ದರು. ಫಾಸ್ಟ್ ಫುಡ್, ಆಧುನಿಕ ಶೈಲಿಯ ಆಹಾರ ಸೇವನೆ ದೇಹಾರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ, ನರೇಗ ಯೋಜನೆ ಮೂಲಕ ಮನೆಗಳಲ್ಲಿ ತರಕಾರಿ ಬೆಳೆಯಲು ಅವಕಾಶವಿದ್ದು, ಅದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.

ಗ್ರಾಮದಲ್ಲಿ 95 ಶೇ. ಕೋವಿಡ್ ಲಸಿಕೆ ಪ್ರಗತಿಯಲ್ಲಿದ್ದು, ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆದು ಶೇ. 100 ಸಾಧನೆಗೆ ಸಹಕರಿಸುವಂತೆ ಮನವಿ ಮಾಡಿದರು.

ವಾರ್ಡ್ ಸದಸ್ಯರಾದ ಶಶಿಧರ ವಾಗ್ಲೆ, ಹರೀಶ್ ಶೆಟ್ಟಿ ಕಕ್ರಮನೆ, ಪ್ರೇಮಾ ವೆಂಕಟೇಶ್ ಮತ್ತು ಸಂತೋಷ್ ಕುಲಾಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕ್ರಮ ನೆರವೇರಿಸಲಾಯಿತು.

ಅಪೌಷ್ಠಿಕತೆ ಇರುವ ಮಕ್ಕಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಆಶಾ ಕಾರ್ಯಕರ್ತೆಯರಾದ ಶಕುಂತಳಾ ಆಚಾರ್ಯ, ದಿವ್ಯಾ ಮತ್ತು ಯಶೋದಾ, ಸ್ತ್ರೀಶಕ್ತಿ ಗುಂಪುಗಳ ಸದಸ್ಯೆಯರು ಮತ್ತು ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದರು.

ಪಿಡಿಒ ವಸಂತಿ ಬಾ ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶೈಲಾ ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದರು. ಮಾನಸ ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ಆರ್. ಪೂಜಾರಿ ಪ್ರಾರ್ಥಿಸಿದರು. ಪಡುಬೆಳ್ಳೆ ಅಂಗನವಾಡಿ ಶಿಕ್ಷಕಿ ಜಯಶ್ರೀ ಆಚಾರ್ಯ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!