Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮೀನುಗಾರಿಕೆ ಫೆಡರೇಶನ್ ಗೆ 2.52 ಕೋ. ನಿವ್ವಳ ಲಾಭ

ಮೀನುಗಾರಿಕೆ ಫೆಡರೇಶನ್ ಗೆ 2.52 ಕೋ. ನಿವ್ವಳ ಲಾಭ

ಮೀನುಗಾರಿಕೆ ಫೆಡರೇಶನ್: 2.52 ಕೋ. ನಿವ್ವಳ ಲಾಭ

ಮಂಗಳೂರು, ನ. 25 (ಸುದ್ದಿಕಿರಣ ವರದಿ): ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 2020- 21ನೇ ಸಾಲಿನಲ್ಲಿ 2.52 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ರಾಜ್ಯ ಸರಕಾರದ ಮೀನುಗಾರಿಕೆ ಇಲಾಖೆ, ಸಂಸ್ಥೆಯ ಸದಸ್ಯ ಸಹಕಾರಿ ಸಂಸ್ಥೆಗಳು, ವೈಯಕ್ತಿಕ ಸದಸ್ಯರು ಹಾಗೂ ಸಮಸ್ತ ಮೀನುಗಾರರ ಸಹಕಾರದಿಂದ ಮೀನು ಮಾರಾಟ, ಡೀಸೆಲ್ ಮಾರಾಟ, ಆರ್ಥಿಕ ಸೇವೆ, ಮೋಬಿಲ್ ಎಣ್ಣೆ ಮಾರಾಟ, ಸೀಮೆಎಣ್ಣೆ ಹಾಗೂ ಮೀನುಗಾರಿಕೆ ಸಲಕರಣೆಗಳ ಮಾರಾಟ ಮತ್ತು ಮಂಜುಗಡ್ಡೆ ವ್ಯವಹಾರಗಳಿಂದ 158 ಕೋ. ರೂ. ವ್ಯವಹಾರ ಮಾಡಿ ನಿರ್ವಹಣಾ ವೆಚ್ಚ, ಸವಕಳಿ ಮತ್ತು ಆಡಳಿತಾತ್ಮಕ ವೆಚ್ಚ ಕಳೆದು 2.52 ಕೋ. ನಿವ್ವಳ ಲಾಭ ದಾಖಲಿಸಿದೆ.

ಮೀನುಗಾರರ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ಈ ಸಂಸ್ಥೆ ಮೀನುಗಾರರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಹಕರಿಸುತ್ತಾ ಮೀನುಗಾರರ ಸ್ವಾವಲಂಬನೆಗಾಗಿ ಪ್ರಯತ್ನಿಸುತ್ತಿದೆ. ಕಳೆದ ಹಲವು ವರ್ಷದಿಂದ ಹಲವಾರು ತಾಂತ್ರಿಕ ಕಾರಣಗಳಿಂದ ನಷ್ಟದಲ್ಲಿದ್ದ ಈ ಸಂಸ್ಥೆ, ಮೀನುಗಾರಿಕೆಗೆ ಉಂಟಾದ ಏರಿಳಿತಗಳ ಸಮಸ್ಯೆ ಎದುರಿಸಿಕೊಂಡು ಈಚಿನ 12 ವರ್ಷದಲ್ಲಿ ಒಟ್ಟು 35 ಕೋ. ಲಾಭ ಗಳಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥಗಳೊಂದಿಗೆ ಗುರುತಿಸಿಕೊಂಡಿದೆ.

ಮಲ್ಪೆ ಮತ್ತು ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಸದಸ್ಯರಿಗೆ ಯಶಸ್ವಿ ಆರ್ಥಿಕ ಸೇವಾ ಸೌಲಭ್ಯ ನೀಡಲಾಗುತ್ತಿದ್ದು, ಫೆಡರೇಶನ್ ನ ಆರ್ಥಿಕ ಸೇವಾ ವಿಭಾಗ, ಮೀನುಗಾರಿಕೆ ಸಲಕರಣೆಗಳ ಮಾರಾಟ ವಿಭಾಗ ಮತ್ತು ಫೆಡರೇಶನ್ ಕಚೇರಿಗಳಲ್ಲಿ ಗಣಕಯಂತ್ರ ಅಳವಡಿಸಿ ಸದಸ್ಯರಿಗೆ ಆಧುನಿಕ ಸೌಲಭ್ಯ ನೀಡಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ಜಾಗತಿಕವಾಗಿ ಎಲ್ಲಾ ವ್ಯವಹಾರಗಳಲ್ಲಿ ಏರುಪೇರಾಗಿದ್ದು, ಫೆಡರೇಶನ್ ನ ವ್ಯವಹಾರದಲ್ಲಿಯೂ ಏರಿಳಿತ ಉಂಟಾಗಿದ್ದರೂ ಫೆಡರೇಶನ್ ವ್ಯವಹಾರ ಮತ್ತು ಸದಸ್ಯರಿಗೆ ನೀಡಿರುವ ಸೇವೆಯಿಂದಾಗಿ ವರದಿ ವರ್ಷದಲ್ಲಿ ಉತ್ತಮ ಲಾಭ ಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಯಶಪಾಲ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!