Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಸಣ್ಣ ಉದ್ದಿಮೆದಾರರಿಗೆ ಮಾನ್ಸೂನ್ ಸಾಲ ಯೋಜನೆ

ಸಣ್ಣ ಉದ್ದಿಮೆದಾರರಿಗೆ ಮಾನ್ಸೂನ್ ಸಾಲ ಯೋಜನೆ

ಸುದ್ದಿಕಿರಣ ವರದಿ
ಶನಿವಾರ, ಆಗಸ್ಟ್ 6

ಸಣ್ಣ ಉದ್ದಿಮೆದಾರರಿಗೆ ಮಾನ್ಸೂನ್ ಸಾಲ ಯೋಜನೆ
ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಸಣ್ಣ ಉದ್ದಿಮೆದಾರರಿಗೆ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಮಾನ್ಸೂನ್ ಸಾಲ ಯೋಜನೆ ಆರಂಭಿಸಿರುವುದಾಗಿ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ಈ ವಿಶೇಷ ಸಾಲ ಯೋಜನೆಯಲ್ಲಿ ಹೂ ವ್ಯಾಪಾರಿಗಳು, ಮೀನುಗಾರರು, ತರಕಾರಿ ವ್ಯಾಪಾರಿಗಳು, ಕ್ಷೌರಿಕರು, ರಿಕ್ಷಾ ಚಾಲಕರು, ಗೂಡಂಗಡಿ ವ್ಯಾಪಾರಿಗಳು, ಟೈಲರ್ ಮೊದಲಾದ ಸಣ್ಣ ಉದ್ದಿಮೆದಾರರು ಈ ಯೋಜನೆ ಮೂಲಕ ಸಾಲ ಪಡೆಯಲು ಅರ್ಹರಾಗಿದ್ದು, 50 ಸಾವಿರದಿಂದ 2 ಲಕ್ಷದ ವರೆಗೆ 8 ಶೇ. ಬಡ್ಡಿ ದರದಲ್ಲಿ ಅರ್ಹ ಗ್ರಾಹಕರಿಗೆ ತ್ವರಿತವಾಗಿ ಸಾಲ ಮಂಜೂರು ಮಾಡಲಾಗುವುದು.

ಮಹಾಲಕ್ಷ್ಮೀ ಬ್ಯಾಂಕ್ ಉಳಿತಾಯ ಖಾತೆಗಳಿಗೆ ಆಕರ್ಷಕ ಬಡ್ಡಿದರ ನೀಡಲಾಗುತ್ತಿದ್ದು, ಮಹಾಲಕ್ಷ್ಮೀ ಪ್ಲಾಟಿನಂ ಉಳಿತಾಯ ಖಾತೆಯಲ್ಲಿ ಕನಿಷ್ಟ ಠೇವಣಿ 5 ಲಕ್ಷ ಹೊಂದಿದಲ್ಲಿ ವೈಯಕ್ತಿಕ ಖಾತೆಗೆ 4.75 ಶೇ., ಮಹಾಲಕ್ಷ್ಮೀ ಗೋಲ್ಡ್ ಉಳಿತಾಯ ಖಾತೆಯಲ್ಲಿ ಕನಿಷ್ಟ ಠೇವಣಿ 2 ಲಕ್ಷ ಹೊಂದಿದಲ್ಲಿ 4.25 ಶೇ. ಹಾಗೂ ನೋಂದಾಯಿತ ಸಂಘ ಸಂಸ್ಥೆಗಳಿಗೆ ಹೆಚ್ಚುವರಿ 0.5 ಶೇ ಬಡ್ಡಿ ನೀಡಲಾಗುವುದು ಎಂದು ಯಶಪಾಲ್ ತಿಳಿಸಿದ್ದಾರೆ.

ಆಜಾದಿ ಕಾ ಅಮೃತ್ ಮಹೋತ್ಸವದ ಸಂಭ್ರಮಾಚರಣೆ ಸಂದರ್ಭದಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿಕೊಂಡಿದ್ದ ನಿವೃತ್ತ ಸೇನಾನಿಗಳನ್ನು ಗೌರವಿಸುವ ನಿಟ್ಟಿನಲ್ಲಿ ಆಗಸ್ಟ್ 31ರ ವರೆಗೆ ಮಾಜಿ ಸೈನಿಕರಿಗೆ ನಿರಖು ಠೇವಣಿ ಮೇಲೆ 1 ಶೇ. ಅಧಿಕ ಬಡ್ಡಿ ನೀಡಲಾಗುವುದು.

ವಿದ್ಯಾರ್ಥಿಗಳಲ್ಲಿ ಉಳಿತಾಯ ಮನೋಭಾವನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ವಿದ್ಯಾಸಿರಿ ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆ ಮೂಲಕ ಉಚಿತ ಎಟಿಎಮ್ ಕಾರ್ಡ್ ಒದಗಿಸಲಾಗುತ್ತಿದೆ.

ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಿಗೆ ಸರಿಸಮನಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಸಬ್ಸಿಡಿ ಪಡೆಯಲು ಗ್ರಾಹಕರ ಮಹಾಲಕ್ಷ್ಮೀ ಬ್ಯಾಂಕ್ ಖಾತೆಗೆ ಸರಕಾರ ಮಾನ್ಯತೆ ನೀಡಿದೆ.

ಯೋಜನೆ ಹಾಗೂ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಹಾಲಕ್ಷ್ಮೀ ಬ್ಯಾಂಕಿನ ಶಾಖಾ ಪ್ರಬಂಧಕರನ್ನು ಸಂಪರ್ಕಿಸುವಂತೆ ಯಶಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!