ಕುಂದಾಪುರ: ಇಲ್ಲಿನ ಕೆರಾಡಿ ಗ್ರಾಮದ ಕಾರೆಬೈಲು ಆದಿವಾಸಿಗಳಾದ ಹಸಲರ ಸಮುದಾಯದವರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಶಿಬಿರ ಉದ್ಘಾಟಿಸಿ, ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸದೇ ಎದುರಿಸಬೇಕು. ಸೋಂದಿನ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿ, ಮುಗ್ದರಲ್ಲಿ ಭಯ ಮೂಡಿಸದೇ ಸೋಂಕನ್ನು ಧೈರ್ಯದಿಂದ ಎದುರಿಸಲು ಮತ್ತು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಎಸ್. ವೈ. ಗುರುಶಾಂತ್, ಆದಿವಾಸಿ ಸಮುದಾಯಗಳು ಅತ್ಯಂತ ಆರೋಗ್ಯದಾಯಕ ಬದುಕು ನಡೆಸಿದವರು. ಆದರೆ, ಇಂದಿನ ದಿನಗಳಲ್ಲಿ ಅತ್ಯಂತ ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕೆಲವು ಸಮುದಾಯಗಳು ಅಳಿವಿನ ಅಂಚಿನಲ್ಲಿವೆ. ಸರ್ಕಾರದ ಅರಣ್ಯ ನೀತಿ, ಜೀವ ವೈವಿಧ್ಯತೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ನಿರ್ಬಂಧ ಇತ್ಯಾದಿಗಳೂ ಅದಕ್ಕೆ ಕಾರಣ. ಆದಿವಾಸಿ ಸಮುದಾಯಗಳ ಆರೋಗ್ಯ ಸಂರಕ್ಷಣೆಗಾಗಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಡಾ. ಎ. ಅನಿಲ್ ಕುಮಾರ್ ಮಾರ್ಗದರ್ಶನದೊಂದಿಗೆ ತರಬೇತಿ ಕಾರ್ಯಾಗಾರ ಆಯೋಜಿಸಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ. ಶ್ರೀಕಾಂತ ಕೊಲ್ಲೂರು, ಆದಿವಾಸಿ ಸಮುದಾಯಗಳ ಆರೋಗ್ಯ ಸಂರಕ್ಷಣೆಗಾಗಿ ಪ್ರತೀ ಗ್ರಾಮದಲ್ಲಿ ಸ್ವಯಂಸೇವಕರ ತಂಡ ರಚಿಸಿ ಆ ಮೂಲಕ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ಉತ್ತಮ ಕೆಲಸ ಎಂದರು.
ಪ್ರಜಾವೈದ್ಯ ಡಾ. ಎ. ಅನಿಲ್ ಕುಮಾರ್ ಬಾಗೇಪಲ್ಲಿ, ಕೋವಿಡ ಲಕ್ಷಣಗಳಿದ್ದಲ್ಲಿ ಆರಂಭದಲ್ಲೇ ವೈದ್ಯರ ಬಳಿ ತೆರಳುವುದು ಅಗತ್ಯ. ಈ ಕಾರ್ಯವನ್ನು ಆದಿವಾಸಿ ಆರೋಗ್ಯ ಸಂರಕ್ಷಣೆ ಸ್ವಯಂಸೇವಕರು ಮಾಡುತ್ತಾರೆ. ಅವರ ಬಳಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಮಾತ್ರೆಗಳೂ ಇದೆ ಎಂದರು.
ಜಲಜ ಕತ್ತಲಕೊಡು ಅಧ್ಯಕ್ಷತೆ ವಹಿಸಿದ್ದರು.
ಮೂರ್ತಿ ಕಬ್ಬಿನಾಲೆ, ರವಿ ದೇವರಬಾಳು, ರಾಜೇಶ್ ಕೊಟುಗುಳಿ, ಸುಧಾಕರ ಕಾರೆಬೈಲು, ಸಂಜು ಕಾರೆಬೈಲು, ಬೇಬಿ ಕತ್ತಲಕೊಡು, ಶಿವರಾಜ್ ನಾಡ, ಗಣೇಶ ಆಲೂರು ಇದ್ದರು. ಶ್ರೀಧರ ನಾಡ ನಿರೂಪಿಸಿದರು. ಕವಿತಾ ಸ್ವಾಗತಿಸಿ, ಸುಧಾ ವಂದಿಸಿದರು.
ಈ ಸಂದರ್ಭದಲ್ಲಿ ಆದಿವಾಸಿ ಆರೋಗ್ಯ ಸ್ವಯಂಸೇವಕರಿಗೆ ಅಗತ್ಯ ಔಷಧಿ ಮತ್ತು ತಪಾಸಣೆ ಪರಿಕರಗಳನ್ನು ಡಾ. ಎ. ಅನಿಲ್ ಕುಮಾರ್ ವಿತರಿಸಿದರು