Thursday, July 7, 2022
Home ಲೋಕಾಭಿರಾಮ ರೋಗ ನಿರೋಧಕ ಶಕ್ತಿ ವರ್ಧನೆಗೆ ಇಮ್ಯೂನಿಟಿ ಕ್ಯಾಂಪೇನ್

ರೋಗ ನಿರೋಧಕ ಶಕ್ತಿ ವರ್ಧನೆಗೆ ಇಮ್ಯೂನಿಟಿ ಕ್ಯಾಂಪೇನ್

ಉಡುಪಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೂರಕವಾಗುವಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ರಾಜ್ಯವ್ಯಾಪಿ 55 ಸಂಸ್ಥೆಗಳು ಮತ್ತು ಇತರ ಸಹಸಂಸ್ಥೆಗಳ ಸಿಬಂದಿಗಳ ಆರೋಗ್ಯ ರಕ್ಷಣೆಯನ್ನು ಗಮನದಲ್ಲಿರಿಸಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸೂಚನೆ ಮೇರೆಗೆ ಡಿಸೆಂಬರ್ ತಿಂಗಳನ್ನು ರೋಗ ನಿರೋಧಕ ವರ್ಧನೆ ಮಾಸ (ಇಮ್ಯುನಿಟಿ ಕ್ಯಾಂಪೇನ್) ಎಂದು ಆಚರಿಸುವುದಾಗಿ ಉಡುಪಿ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ ಜನರಲ್ ಮ್ಯಾನೇಜರ್ ಡಾ. ಮುರಳೀಧರ ಬಲ್ಲಾಳ್ ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕವಾಗಿ ಹರಡುತ್ತಿರುವ ಕಾಲಘಟ್ಟದಲ್ಲಿ ಅದನ್ನು ತಹಬಂದಿಗೆ ತರಲು ಸರಕಾರದ ವಿವಿಧ ಕಾರ್ಯಕ್ರಮಗಳನ್ನು ಎಲ್ಲರೂ ಪಾಲಿಸುತ್ತಿದ್ದಾರೆ. ಆದರೆ ಕೊರೊನಾ ಹೊರತುಪಡಿಸಿ ಜನತೆ ಸಾಮಾನ್ಯ ನೆಗಡಿ, ಶೀತ, ಕೆಮ್ಮು, ಕಫ, ಜ್ವರ ಇವುಗಳಿಂದ ಬಳಲುತ್ತಿದ್ದಾರೆ. ಅತ್ಯಾಧುನಿಕ ಜೀವನ ಶೈಲಿ, ಆಹಾರ ಪದ್ಧತಿ ವ್ಯತ್ಯಯ, ಮಾನಸಿಕ ಒತ್ತಡ, ದೈಹಿಕ ಶ್ರಮದ ಕೊರತೆ, ಹವಾಮಾನ ಇತ್ಯಾದಿ ರೋಗ ನಿರೋಧಕ ಶಕ್ತಿ ಕುಗ್ಗಿಸುವುದಲ್ಲದೆ ವಿವಿಧ ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಇಂಥ ಸಂದರ್ಭದಲ್ಲಿ ಕ್ರಮಬದ್ಧ ಆಹಾರ ಕ್ರಮ ಮತ್ತು ಔಷಧೋಪಚಾರಗಳಿಂದ ವ್ಯಾಧಿ ಕ್ಷಮತ್ವ ಶಕ್ತಿ ಪುನರುಜ್ಜೀವನಗೊಂಡು ದೈಹಿಕ ಆರೋಗ್ಯ ಸ್ಥಿರಗೊಳ್ಳುತ್ತದೆ ಎಂದು ಡಾ. ಬಲ್ಲಾಳ್ ತಿಳಿಸಿದ್ದಾರೆ.
ಜ್ವರ ನಿಯಂತ್ರಿಸಲು ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಸೂಚಿಸಿರುವ ಸುದರ್ಶನ ಚೂರ್ಣ ವಟಿ ಅತ್ಯಂತ ಪರಿಣಾಮಕಾರಿ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಕಿರಾತತಿಕ್ತ, ತ್ರಿಕಟು, ಪರ್ಪಟ, ಕಟುಕಿ ಮುಂತಾದ ಅಮೂಲ್ಯ ನೈಸರ್ಗಿಕ ದ್ರವ್ಯಗಳ ಸಮ್ಮಿಶ್ರಣದಿಂದ ತಯಾರಿಸಲ್ಪಟ್ಟ ಈ ಔಷಧ, ಆಮಪಾಚಕವಾಗಿ ಧಾತ್ವಗ್ನಿ ಮಾಂದ್ಯ ಪರಿಹರಿಸಿ ಸ್ರೋತೋ ಶುದ್ಧಿಯನ್ನುಂಟುಮಾಡಿ ಆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸಾಮಾನ್ಯ ವೈರಲ್ ಜ್ವರ ಮತ್ತು ಅದರೊಂದಿಗಿನ ಇತರ ಲಕ್ಷಣಗಳನ್ನು ಪರಿಹರಿಸುತ್ತದೆ.

ಇಮ್ಯೂನಿಟಿ ಕ್ಯಾಂಪೇನ್
ಈ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗುವ ಇಮ್ಯೂನಿಟಿ ಕ್ಯಾಂಪೇನ್ ನಲ್ಲಿ ಒಂದು ತಿಂಗಳ ಪರ್ಯಂತ ಸುದರ್ಶನ ಚೂರ್ಣ ವಟಿ (650 ಮಿ.ಗ್ರಾಂ.) ಮಾತ್ರೆಯನ್ನು ಹೊತ್ತಿಗೆ 2ರಂತೆ ದಿನಕ್ಕೆ ಎರಡು ಬಾರಿ ಬಿಸಿ ನೀರಿನೊಂದಿಗೆ ಆಹಾರ ಸೇವಿಸಿದ ಬಳಿಕ ಸೇವಿಸಬೇಕು. ಮತ್ತು ಅದಕ್ಕೆ ಪೂರಕವಾಗಿ ಆಯುಷ್ ಕ್ವಾಥ 15ರಿಂದ 20 ಎಮ್.ಎಲ್. ಕಷಾಯವನ್ನು 100 ಮಿ.ಲೀ. ಬಿಸಿ ನೀರಿಗೆ ಸೇರಿಸಿ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಮತ್ತು ಚ್ಯವನಪ್ರಾಶ ಲೇಹ್ಯ (1 ದೊಡ್ಡ ಚಮಚೆಯಷ್ಟು ಪ್ರಮಾಣ) ದಿನಕ್ಕೆ ಎರಡು ಬಾರಿ ಸೇವಿಸುವುದು ಉತ್ತಮ ಪರಿಣಾಮಕಾರಿ ಎಂದು ಡಾ. ಮುರಳೀಧರ ಬಲ್ಲಾಳ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!