Thursday, July 7, 2022
Home ಲೋಕಾಭಿರಾಮ ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣವಾಗಲಿ

ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣವಾಗಲಿ

ಉಡುಪಿ: ಕ್ಷಯ ರೋಗದ ಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೆ ಕೂಡಲೇ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಘಟಕದ ವೈದ್ಯಕೀಯ ಅಧಿಕಾರಿ ಡಾ. ವನಿತಾ ಗುರುದತ್ ಹೇಳಿದರು.

ಇಲ್ಲಿನ ಭಾರತೀಯ ರೆಡ್ ಕ್ರಾಸ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಧನ್ವಂತರಿ ನರ್ಸಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆಯಲ್ಲಿ ಮಾತನಾಡಿದರು.

ಕ್ಷಯ ರೋಗವನ್ನು ಆರಂಭದಲ್ಲೇ ಗುರುತಿಸುವುದರೊಂದಿಗೆ ಸಮರ್ಪಕ ಹಾಗೂ ನಿರಂತರ ವೈದ್ಯಕೀಯ ಚಿಕಿತ್ಸೆ ಪಡೆದಲ್ಲಿ ರೋಗದಿಂದ ಮುಕ್ತರಾಗಲು ಸಾಧ್ಯ ಎಂದ ಅವರು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ರೋಗದ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಸಾಮಾನ್ಯವಾಗಿ ಕ್ಷಯ ರೋಗದಿಂದ ಬಳಲುತ್ತಿರುವ ವ್ಯಕ್ತಿ ಕೆಮ್ಮಿದಾಗ ಮತ್ತು ಉಗುಳಿದಾಗ ಹೊರಬರುವ ಸೂಕ್ಷ್ಮ ತುಂತುರು ದ್ರವದ ಮೂಲಕ ವೈರಸ್ ಇತರ ವ್ಯಕ್ತಿಗಳ ದೇಹ ಸೇರಿದಾಗ ಅಂಥ ವ್ಯಕ್ತಿಗಳೂ ಕ್ಷಯ ರೋಗಕ್ಕೆ ತುತ್ತಾಗುತ್ತಾರೆ. ಕ್ಷಯ ರೋಗ ಟ್ಯುಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ ಎಂದರು.

ಎರಡು ವಾರ ಕಾಲ ನಿರಂತರ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ರಾತ್ರಿ ವೇಳೆ ಬೆವರುವುದು ಕ್ಷಯ ರೋಗದ ಲಕ್ಷಣ ಎಂದ ಅವರು, ಈ ಲಕ್ಷಣ ಕಂಡ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಕ್ಷಯ ರೋಗ ಪುರಾತನ ಕಾಲದಿಂದಲೂ ಪ್ರಚಲಿತದಲ್ಲಿರುವ ಕಾಯಿಲೆ. ಆ ಕಾಲದಲ್ಲಿ ಮನೆಯಲ್ಲೇ ಹಳ್ಳಿಮದ್ದು ಮಾಡುತ್ತಿದ್ದರು. ಆದರೆ, ಈಗ ತಂತ್ರಜ್ಞಾನ ಬಹಳ ಮುಂದುವರೆದಿದೆ. ಸೂಕ್ತ ಚಿಕಿತ್ಸೆ ದೊರೆಯುತ್ತಿದೆ. ಕ್ಷಯ ರೋಗ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದರು.

ರೆಡ್ ಕ್ರಾಸ್ ಖಜಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ, ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ವೈ. ಜಿ., ಧನ್ವಂತರಿ ನರ್ಸಿಂಗ್ ಕಾಲೇಜು ಉಪನ್ಯಾಸಕ ಶಿವಪ್ರಸಾದ್, ರೆಡ್ ಕ್ರಾಸ್ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!