Saturday, July 2, 2022
Home ಲೋಕಾಭಿರಾಮ ಮಕ್ಕಳ ಮೂತ್ರಪಿಂಡ ಕಾಯಿಲೆ ಜಾಗೃತಿ

ಮಕ್ಕಳ ಮೂತ್ರಪಿಂಡ ಕಾಯಿಲೆ ಜಾಗೃತಿ

ಉಡುಪಿ: ವಿಶ್ವ ಮೂತ್ರಪಿಂಡ ದಿನ ಅಂಗವಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಮೂತ್ರಪಿಂಡ ವಿಭಾಗ ಉದ್ಘಾಟನೆ ಹಾಗೂ ಮೂತ್ರಪಿಂಡ ಕಾಯಿಲೆ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ. ಪುಷ್ಪಾ ಜಿ. ಕಿಣಿ ವಿಭಾಗ ಉದ್ಘಾಟಿಸಿ, ಮೂತ್ರಪಿಂಡ ಕಾಯಿಲೆ ಇರುವವರು ಉತ್ತಮ ಜೀವನ ನಡೆಸಲು ಪ್ರಮುಖವಾದ 8 ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧನಾತ್ಮಕ ಚಿಂತನೆ, ನಿಯಮಿತ ವೈದ್ಯರ ಭೇಟಿ ಮತ್ತು ಕಿಡ್ನಿ ಪರೀಕ್ಷೆ, ಧೂಮಪಾನದಿಂದ ದೂರ, ಪೌಷ್ಠಿಕಾಂಶವುಳ್ಳ ಪಥ್ಯಾಹಾರ ಸೇವನೆ, ರಕ್ತದೊತ್ತಡ ನಿಯಂತ್ರಣ, ರಕ್ತದ ಸಕ್ಕರೆ ಅಂಶ ನಿಯಂತ್ರಣ, ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯಬೇಕು. ವೈದ್ಯರ ಸಲಹೆ ಪಡೆಯದೆ ಮಾತ್ರೆ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಮೂತ್ರಪಿಂಡ ಕಾಯಿಲೆ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಪ್ರತಿವರ್ಷ ಮಾರ್ಚ್ ಎರಡನೇ ಗುರುವಾರವನ್ನು ಮೂತ್ರ ಪಿಂಡ ದಿನವನ್ನಾಗಿ ಆಚರಿಸಲಾಗುತ್ತದೆ. ಜೀವನ ಶೈಲಿಯ ಬದಲಾವಣೆಯಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆ ಬರಲಿದ್ದು, ಕಿಡ್ನಿಗಳ ಮೇಲೆ ಪರಿಣಾಮ ಬೀರುತ್ತವೆ. ಕೂಡಲೇ ಜಾಗ್ರತೆ ವಹಿಸಿದಲ್ಲಿ ಶೇ. 50ರಷ್ಟು ಕಿಡ್ನಿ ಕಾಯಿಲೆ ಕಡಿಮೆ ಮಾಡಬಹುದು. ಈಚಿನ ಸಂಶೋಧನೆ ಪ್ರಕಾರ ಕೈಗಾರಿಕಾ ತ್ಯಾಜ್ಯದಿಂದ ಬೆಳೆದ ಆಹಾರ ಪದಾರ್ಥವೂ ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತಿದೆ. ವರ್ಷಕ್ಕೊಮ್ಮೆ ಕಿಡ್ನಿ ಪರೀಕ್ಷಿಸಿಕೊಳ್ಳಬೇಕು ಎಂದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಜಿ. ಮುತ್ತನ್ನ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಶಂಕರ ಪ್ರಸಾದ್, ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ. ಲೆಸ್ಲಿ ಲೀವಿಸ್ ಇದ್ದರು.

ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಮಂಜುನಾಥ್, ಡಾ. ರವೀಂದ್ರ ಪ್ರಭು ಡಾ. ದರ್ಶನ್ ರಂಗಸ್ವಾಮಿ, ಡಾ. ನವೀನ್ ಎಸ್. ಸಾಲಿನ್ಸ್ ಇದ್ದರು.

ಮಕ್ಕಳ ಮೂತ್ರಪಿಂಡ ವಿಭಾಗವನ್ನು ತಜ್ಞ ಡಾ. ದರ್ಶನ್ ರಂಗಸ್ವಾಮಿ ಮುನ್ನಡೆಸಲಿದ್ದಾರೆ. ಅವರು ಆಸ್ಟ್ರೇಲಿಯಾದ ಸಿಡ್ನಿ ರಾಯಲ್ ಆಸ್ಟ್ರೇಲಿಯನ್ ಕಾಲೇಜ್ ಆಫ್ ಫಿಸಿಶಿಯನ್ ನಿಂದ ಅನುಮೋದನೆಗೊಂಡಿರುವ ಪಿಡಿಯಾಟ್ರಿಕ್ ನೆಫ್ರಾಲಜಿಯಲ್ಲಿ ಕ್ಲಿನಿಕಲ್ ಫೆಲೋಶಿಪ್ ಪಡೆಡಿದ್ದಾರೆ. ಪ್ರತಿ ಸೋಮವಾರ ಮತ್ತು ಶುಕ್ರವಾರ ಸಮಾಲೋಚನೆಗಾಗಿ ಲಭ್ಯರಿರುತ್ತಾರೆ.

ಹೊಸ ವಿಭಾಗ ಪ್ರಯುಕ್ತ ಮಾ. 31ರ ವರೆಗೆ ಉಚಿತ ಸಮಾಲೋಚನೆ ಮತ್ತು ಪ್ರಯೋಗಾಲಯ ಶುಲ್ಕದಲ್ಲಿ ಶೇ. 30ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!