ಮಂಗಳುರು: ಅರೆಹೊಳೆ ಪ್ರತಿಷ್ಠಾನ ಪ್ರತೀ ವರ್ಷ ಆಯೋಜಿಸುವ ನೃತ್ಯ ವರ್ಷಾ ಸಂದರ್ಭದಲ್ಲಿ ನೃತ್ಯ ಕಲಾವಿದರಿಗೆ ನೀಡುವ ವಾರ್ಷಿಕ ಪ್ರಶಸ್ತಿ ನಂದಗೋಕುಲ ಕಲಾ ಪುರಸ್ಕಾರ 2020ನೇ ಸಾಲಿನ ಪ್ರಶಸ್ತಿಗೆ ಖ್ಯಾತ ನೃತ್ಯ ಗುರು, ಯಕ್ಷಗಾನ ಕಲಾವಿದೆ ವಿದುಷಿ ಸುಮಂಗಲಾ ರತ್ನಾಕರ್ ಆಯ್ಕೆಯಾಗಿದ್ದಾರೆ.
ಭರತನಾಟ್ಯ, ಕರ್ಣಾಟಕ ಶಾಸ್ತ್ರೀಯ ಸಂಗೀತ, ಕೂಚುಪುಡಿ, ಯಕ್ಷಗಾನ, ತಾಳಮದ್ದಲೆ, ಕಾರ್ಯಕ್ರಮ ನಿರೂಪಣೆ, ನೃತ್ಯ ಸಾಹಿತ್ಯ, ಹವ್ಯಾಸಿ ಲೇಖಕಿ, ಸಂಲನ್ಮೂಲವ್ಯಕ್ತಿ, ನಟುವನ್ನಾರ್, ಕಾರ್ಯಕ್ರಮ ಸಂಘಟಕಿಯಾಗಿ ಗುರುತಿಸಿಕೊಂಡ ನಾಟ್ಯಾರಾಧನಾ ಮತ್ತು ಯಕ್ಷಾರಾಧನಾ ಎಂಬ ಸಂಸ್ಥೆಗಳ ಮೂಲಕ ಭರತನಾಟ್ಯ, ಯಕ್ಷಗಾನ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇಲ್ಲಿನ ಗಾನ ನೃತ್ಯ ಅಕಾಡೆಮಿ ಸಹಯೋಗದೊಂದಿಗೆ ಮಾ. 27ರಂದು ಸಂಜೆ 6.30ಕ್ಕೆ ನಂತೂರು ಪಾದುವಾ ಥಿಯೇಟರ್ ಹಬ್ ನಲ್ಲಿ ನಡೆಯಲಿರುವ ನೃತ್ಯವರ್ಷಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಗೌರವ ಮೊತ್ತ ಸಹಿತ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಗಾನ ನೃತ್ಯ ಅಕಾಡೆಮಿ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪ್ರಕಟಣೆ ತಿಳಿಸಿದೆ.