Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪೈತಾನ್ ಪ್ರೋಗ್ರಾಮಿಂಗ್ ಕಾರ್ಯಾಗಾರ

ಪೈತಾನ್ ಪ್ರೋಗ್ರಾಮಿಂಗ್ ಕಾರ್ಯಾಗಾರ

ಪೈತಾನ್ ಪ್ರೋಗ್ರಾಮಿಂಗ್ ಕಾರ್ಯಾಗಾರ

ಶಿರ್ವ, ಡಿ. 10 (ಸುದ್ದಿಕಿರಣ ವರದಿ): ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಕಂಪ್ಯೂಟರ್ ತಂತ್ರಾಂಶ ವಿನ್ಯಾಸಗೊಳಿಸಿ ವಿವಿಧ ಅಪ್ಲಿಕೇಶನ್ ಗಳನ್ನು ರೂಪಿಸುವಲ್ಲಿ ಪೈತಾನ್ ಪ್ರೋಗ್ರಾಮ್ ವಿಶಿಷ್ಟತೆ ಹೊಂದಿದೆ. ಸ್ಮಾರ್ಟ್ ಫೋನ್ ನಂಥ ಸಾಧನಗಳನ್ನು ಪ್ರತಿಯೊಬ್ಬರೂ ಸುಲಭವಾಗಿ ಬಳಕೆ ಮತ್ತು ಸಮರ್ಪಕ ಕಾರ್ಯನಿರ್ವಹಣೆ ಮಾಡಲು ಇಂಥ ತಾಂತ್ರಿಕತೆ ಅಗತ್ಯ ಎಂದು ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಡಾ| ನಾಗರಾಜ್ ಭಟ್ ಹೇಳಿದರು.

ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಬಂಟಕಲ್ಲು ಶ್ರೀಮಧ್ವ ವಾದಿರಾಜ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ ಮೆಂಟ್ ಪರಸ್ಪರ ಒಡಂಬಡಿಕೆಯನ್ವಯ ಕಾಲೇಜಿನ ದೃಶ್ಯ- ಶ್ರಾವ್ಯ ಕೊಠಡಿಯಲ್ಲಿ ಏರ್ಪಡಿಸಿದ ಪೈತಾನ್ ಪ್ರೋಗ್ರಾಮಿಂಗ್ ಒಂದು ದಿನದ ಕಾರ್ಯಾಗಾರದ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.

ಸಂಪನ್ಮೂಲವ್ಯಕ್ತಿಯಾಗಿದ್ದ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಶರತ್ ಕುಮಾರ್, ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷತೆ ಮೂಲಕ ತರಬೇತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್, ಈಚಿನ ಮಾನವ ರೋಬೊ ರೂಪಿಸುವಲ್ಲಿ ಪೈತಾನ್ ಪ್ರೋಗ್ರಾಮಿಂಗ್ ಗಳನ್ನು ವಿಶಿಷ್ಟ ರೂಪದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಕಂಪ್ಯೂಟರ್ ವಿದ್ಯಾರ್ಥಿಯೂ ಇಂಥ ಜ್ಞಾನವನ್ನು ಪಡೆಯುವ ಮೂಲಕ ಉದ್ಯೋಗ ಕ್ಷೇತ್ರ, ಬದಲಾಗುತ್ತಿರುವ ತಂತ್ರಾಂಶ ಅರ್ಥಮಾಡಿಕೊಳ್ಳುವುದು ಅತ್ಯಗತ್ಯ ಎಂದರು.

ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೊದಲಾದ ಆಧುನಿಕ ತಂತ್ರಾಂಶವನ್ನು ರೂಪಿಸಲು ಸೈಂಟಿಸ್ಟ್ ಗಳು ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಗಳು ಹೆಚ್ಚಾಗಿ ಕಳೆದ ಎರಡು ದಶಕದಲ್ಲಿ ಪೈತಾನ್ ವಿಕಸನಗೊಂಡಂತೆ ಅಳವಡಿಕೆ ಜೊತೆಗೆ ಬಳಕೆಯ ಪ್ರಕರಣ ಬೆಳೆದಿವೆ ಎಂದು ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆ| ಪ್ರವೀಣ್ ಕುಮಾರ್ ಮಾಹಿತಿ ನೀಡಿ, ಪ್ರಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕರಾದ ಪ್ರಕಾಶ್, ಸುಷ್ಮಾ ಮತ್ತು ದಿವ್ಯಶ್ರೀ, ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಎಸ್.ಎಂ.ವಿ.ಐ.ಟಿ.ಎಂ ವಿದ್ಯಾರ್ಥಿಗಳಾದ ವೈಷ್ಣವಿ ಮತ್ತು ವಿಕ್ರಮ, ಕಾಲೇಜಿನ ವಿದ್ಯಾರ್ಥಿಗಳಾದ ವರ್ಷಿತ್ ಶೆಟ್ಟಿ ಮತ್ತು ವಿಧಾತ ಶೆಟ್ಟಿ ಸಹಕರಿಸಿದರು.

ವಿದ್ಯಾರ್ಥಿನಿಯರಾದ ಶ್ರಾವ್ಯ ಮತ್ತು ಬಳಗ ಪ್ರಾರ್ಥಿಸಿದರು. ಪ್ರಿಯಾಂಕ ಸ್ವಾಗತಿಸಿ, ಮಾನಸಿ ಸಾಲಿಯಾನ್ ವಂದಿಸಿದರು. ಸುರೇಖಾ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!