Saturday, July 2, 2022
Home ಲೋಕಾಭಿರಾಮ ಸಂಧ್ಯಾರಶ್ಮಿ ವಾರ್ಷಿಕ ಸಂಚಿಕೆ ಅನಾವರಣ

ಸಂಧ್ಯಾರಶ್ಮಿ ವಾರ್ಷಿಕ ಸಂಚಿಕೆ ಅನಾವರಣ

ಉಡುಪಿ: ಕಾಲೇಜಿನ ವಾರ್ಷಿಕ ಸಂಚಿಕೆಗಳು ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯಕ್ಕೆ ಪೂರಕ. ಸಂಚಿಕೆಯ ಪ್ರತಿಯೊಂದು ಲೇಖನಗಳೂ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದೊಂದಿಗೆ ಉತ್ತಮ ಸಂದೇಶ ನೀಡುತ್ತಿವೆ. ಕಾಲೇಜಿನ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ದಾಖಲಿಸುವ ಜೊತೆಗೆ ವಿದ್ಯಾರ್ಥಿಗಳ ಸೃಜನಶೀಲ ಬರವಣಿಗೆಗೆ ಸಂಚಿಕೆ ವೇದಿಕೆಯಾಗಲಿ ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾರೈಸಿದರು.

ಇಲ್ಲಿನ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ವಾರ್ಷಿಕ ಸಂಚಿಕೆ ಸಂಧ್ಯಾ ರಶ್ಮಿ ಅನಾವರಣಗೊಳಿಸಿ ಮಾತನಾಡಿದರು.

ಅಭ್ಯಾಗತರಾಗಿದ್ದ ಕಾರ್ಕಳ ಭುವನೇಂದ್ರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಅರುಣಕುಮಾರ್ ಎಸ್. ಆರ್., ಶಿಕ್ಷಣ ಸಂಸ್ಥೆಗಳು ಕೇವಲ ನಿಗದಿತ ಪಠ್ಯ ಬೋಧಿಸುವುದಕ್ಕೆ ಮಾತ್ರ ಸೀಮಿತವಾಗಿರದೆ, ವಿದ್ಯಾರ್ಥಿಗಳ ಸವರ್ಾಂಗೀಣ ಪ್ರಗತಿ, ವ್ಯಕ್ತಿತ್ವ ರೂಪಿಸಲು ಪೂರಕವಾಗಿ, ಜೀವನ ಮುನ್ನಡೆಸುವ ಸಾಮರ್ಥ್ಯದ ಮಾರ್ಗದರ್ಶಿ ಸೂತ್ರ ಕಲಿಸಬೇಕು ಎಂದರು.

ಉತ್ತಮ ವಿದ್ಯಾಸಂಸ್ಥೆಯೊಂದು ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನು ನೀಡಬಲ್ಲದು. ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳ ಬರವಣಿಗೆ, ಅರಿವು, ತಿಳಿವಿನ ವಿಕಾಸಕ್ಕೆ ಬುನಾದಿ ಹಾಕಿಕೊಡುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳು ಬಳಸಿಕೊಳ್ಳುವುದು ಮುಖ್ಯ ಎಂದರು.

ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ, ವಕೀಲ ಪ್ರದೀಕ ಕುಮಾರ್, ವಿದ್ಯಾರ್ಥಿಗಳು ಭಾರತವನ್ನು ವಿಶ್ವಗುರುವಾಗಿಸಲು ಮೊನಚು ಬರವಣಿಗೆಯಿಂದ ನಿದ್ರಿಸಿದ ಜನರನ್ನು ಎಚ್ಚರಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶಾಸಕ ಲಾಲಾಜಿ ಮೆಂಡನ್ ಅವರಂಥವರನ್ನು ರೂಪಿಸಿದ ಕೀರ್ತಿ ನಮ್ಮ ಸಂಧ್ಯಾ ಕಾಲೇಜಿಗಿದೆ ಎಂದರು.

ಸಂಚಿಕೆಯ ಪ್ರಧಾನ ಸಂಪಾದಕ, ಕಾಲೇಜಿನ ಪ್ರಾಂಶುಪಾಲೆ ಡಾ| ಸುಕನ್ಯಾ ಮೇರಿ ಜೆ. ಅಧ್ಯಕ್ಷತೆ ವಹಿಸಿದ್ದರು. ಸಂಚಿಕೆ ಕಾರ್ಯನಿರ್ವಾಹಕ ಸಂಪಾದಕ, ಕನ್ನಡ ಉಪನ್ಯಾಸಕ ರಮಾನಂದ ರಾವ್ ಸ್ವಾಗತಿಸಿದರು. ಸಹಸಂಪಾದಕಿ, ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಲತಾ ಆಚಾರ್ಯ ನಿರೂಪಿಸಿದರು. ಸಹಸಂಪಾದಕ, ಸಂಸ್ಕೃತ ಉಪನ್ಯಾಸಕ ಡಾ| ರಾಮಕೃಷ್ಣ ಉಡುಪ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!