ಉಡುಪಿ: ಜನಸಾಮಾನ್ಯರಿಗೆ ಸಾಂಕ್ರಾಮಿಕ ರೋಗ ಹರಡಿದ ಬಳಿಕ ಚಿಕಿತ್ಸೆ ನೀಡುವ ಬದಲು ಆ ರೋಗದ ಬಗ್ಗೆ ಜಾಗೃತಿ ಮೂಡಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣ ಘಟಕ ಮತ್ತು ಎನ್.ವಿ.ಬಿ.ಡಿ.ಸಿ.ಪಿ ಸಂಯುಕ್ತಾಶ್ರಯದಲ್ಲಿ ಮಂಗನ ಕಾಯಿಲೆ ಕುರಿತ ಅಂತರ ಇಲಾಖಾ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಸಾಂಕ್ರಾಮಿಕ ರೋಗ ಹರಡಿದಾಗ ಆ ಬಗ್ಗೆ ಎಲ್ಲಾ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ರೋಗ ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ಈಚಿನ ದಿನಗಳಲ್ಲಿ ಜನಸಾಮಾನ್ಯರು ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಮರೆತಂತೆ ಕಂಡುಬರುತ್ತಿದೆ. ಈ ರೀತಿಯ ನಿರ್ಲಕ್ಷ್ಯಕ್ಕೊಳಗಾದಲ್ಲಿ ಕೊರೊನಾ ಸೋಂಕು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಆಸ್ಪದ ನೀಡಬಾರದು ಎಂದು ಎಚ್ಚರಿಸಿದರು.
ನೆರೆಯ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಜನರಿಂದ ಸೋಂಕು ಅಲ್ಲಲ್ಲಿ ಹರಡುವುದು ಕಂಡುಬರುತ್ತಿದೆ. ಜಿಲ್ಲೆಯಲ್ಲಿಯೂ ಆ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯಾಸಂಸ್ಥೆಗಳು, ಹಾಸ್ಟೆಲ್ ಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸೋಂಕು ಕಂಡುಬಂದಲ್ಲಿ ಅವುಗಳನ್ನು ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಿಸುವುದರೊಂದಿಗೆ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಡೆಯಬೇಕು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರಚಂದ್ರ ಸೂಡ, ಕೋವಿಡ್ ಸಮಯದಲ್ಲಿ ಅದರ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಉತ್ತಮ ಮಾರ್ಗದರ್ಶನ ಹಾಗೂ ಸಲಹೆ ನೀಡಿ ಸೋಂಕು ಹೆಚ್ಚು ಹರಡದಂತೆ ತಡೆಯಲು ಸಹಕರಿಸಿದ್ದರು ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್, ಕ್ಯಾಸನೂರ್ ಫಾರೆಸ್ಟ್ ಡಿಸೀಸ್ ಮಂಗಗಳಿಂದ ಹರಡುವ ಕಾಯಿಲೆಯಾಗಿದ್ದು, ಅವುಗಳು ಸತ್ತಾಗ ಅವುಗಳಿಂದ ಉತ್ಪತಿಯಾಗುವ ಉಣ್ಣೆ ಕಚ್ಚುವುದರಿಂದ ಹರಡುತ್ತದೆ. ಕಾಯಿಲೆ ಹಲವಾರು ಲಕ್ಷಣ ಹೊಂದಿದ್ದು, ಸರ್ವೇಕ್ಷಣೆಗೊಳಪಡಿಸುವ ಮೂಲಕ ದೃಢಪಡಿಸಿಕೊಳ್ಳಬೇಕು. ಅದಕ್ಕೆ ವೈಜ್ಞಾನಿಕ ಚಿಕಿತ್ಸೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಎಫ್.ಡಿ ಉಪನಿರ್ದೇಶಕ ಕಿರಣ್ಕುಮಾರ್, ಡಾ. ಪ್ರಶಾಂತ್ ಭಟ್, ಡಾ. ದರ್ಶನ್, ಡಾ. ಪ್ರೇಮಾನಂದ್, ಕೆಎಂಸಿ ವೈದ್ಯ ಡಾ. ನಿತಿನ್ ಗುಪ್ತ ಮೊದಲಾದವರಿದ್ದರು