ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚರ್ಮನಿಧಿ ಉದ್ಘಾಟನೆ
(ಸುದ್ದಿಕಿರಣ ವರದಿ)
ಮಣಿಪಾಲ: ಕರಾವಳಿ ಕರ್ನಾಟಕದ ಮೊಟ್ಟಮೊದಲ ಸ್ಕಿನ್ ಬ್ಯಾಂಕ್ (ಚರ್ಮ ನಿಧಿ) ಶನಿವಾರ ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆ (ಕೆಎಂಸಿ)ಯಲ್ಲಿ ಉದ್ಘಾಟನೆಗೊಂಡಿತು.
ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಂಯುಕ್ತಾಶ್ರಯದಲ್ಲಿ ಆರಂಭಿಸಲಾದ ಸ್ಕಿನ್ ಬ್ಯಾಂಕನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆ ಸಮೂಹ ಅಧ್ಯಕ್ಷ ಡಾ. ರಂಜನ್ ಆರ್. ಪೈ ಉದ್ಘಾಟಿಸಿದರು.
ಸ್ಕಿನ್ ಬ್ಯಾಂಕಿನಿಂದ ಸುಟ್ಟ ಗಾಯಗಳ ಸಂತ್ರಸ್ತರಿಗೆ, ವಿಶೇಷವಾಗಿ ಬಡವರಿಗೆ ಸಹಾಯವಾಗಲಿದೆ. ಸ್ಕಿನ್ ಬ್ಯಾಂಕಿನಲ್ಲಿ ಸುಲಭವಾಗಿ ಲಭ್ಯವಿರುವ ಚರ್ಮ ಬಳಸಿಕೊಂಡು ಸ್ಕಿನ್ ಗ್ರಾಫ್ಟಿಂಗ್ ಮಾಡುವ ಮೂಲಕ ರೋಗಿಗಳಿಗೆ ಉತ್ತಮ ಆರೈಕೆ ಸಿಗಲಿದೆ. ಆ ಮೂಲಕ ಅವರ ಜೀವನದ ಗುಣಮಟ್ಟ ಮತ್ತು ಆತ್ಮವಿಶ್ವಾಸ ವೃದ್ಧಿಸಲಿದೆ.
ಅತ್ಯಾಧುನಿಕ ಮತ್ತು ಗುಣಮಟ್ಟದ ವೈದ್ಯಕೀಯ ಆರೈಕೆ ನೀಡುವಲ್ಲಿ ಮಾಹೆ ಯಾವಾಗಲೂ ಮುಂಚೂಣಿಯಲ್ಲಿದೆ. ಈ ಸ್ಕಿನ್ ಬ್ಯಾಂಕಿನೊಂದಿಗೆ ಮಣಿಪಾಲ ಆಸ್ಪತ್ರೆ ವೈದ್ಯರು ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುವಲ್ಲಿ ತಮ್ಮ ಚಾಣಾಕ್ಷ ಕೌಶಲ್ಯದೊಂದಿಗೆ ಗುಣಮಟ್ಟದ ಸೇವೆ ನೀಡಲಿದ್ದಾರೆ ಎಂದು ಡಾ. ರಂಜನ್ ಪೈ ಹೇಳಿದರು.
ಕೆಎಂಸಿ ಆಸ್ಪತ್ರೆ ಪ್ಲಾಸ್ಟಿಕ್ ಸರ್ಜರಿ ವಿಭಾಗ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಎನ್. ಸಿ. ಶ್ರೀಕುಮಾರ್, ಆಸ್ಪತ್ರೆಯಲ್ಲಿ ಸ್ಕಿನ್ ಬ್ಯಾಂಕಿನ ಅಗತ್ಯತೆ ಮತ್ತು ಉಪಯುಕ್ತತೆಯನ್ನು ವಿವರಿಸಿದರು.
ದೊಡ್ಡ ಸುಟ್ಟ ಗಾಯಗಳ ಸಂದರ್ಭಗಳಲ್ಲಿ ಅಂದರೆ, ಶೇ. 30- 40ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಗಾಯಗೊಂಡಲ್ಲಿ ರೋಗಿಗಳು ತಮ್ಮ ಚರ್ಮ ಉಳಿಸಿಕೊಳ್ಳಲು ಆಗುವುದಿಲ್ಲ. ಹಲವಾರು ದುಬಾರಿ ದರದ ಬದಲಿ ಚರ್ಮ ಲಭ್ಯವಿದ್ದರೂ, ಮೃತ ಮಾನವರ ಚರ್ಮ ಅತ್ಯುತ್ತಮ ಬದಲಿ ಚರ್ಮವಾಗಿದೆ.
ಕೆಎಂಸಿ ಆಸ್ಪತ್ರೆಯಲ್ಲಿ ಇದೀಗ ಸ್ಕಿನ್ ಬ್ಯಾಂಕ್ ಆರಂಭಗೊಂಡಿರುವುದರಿಂದ ಸುಟ್ಟ ಗಾಯ ಚಿಕಿತ್ಸೆಗೆ ರೋಗಿಗಳು ಭಾರತದ ಇತರ ಭಾಗಗಳಿಂದ ಚರ್ಮ ಪಡೆಯಲು ನಿರ್ಣಾಯಕ ಅವಧಿಯ 2- 3 ದಿನಗಳ ವರೆಗೆ ಕಾಯಬೇಕಾಗಿಲ್ಲ. ಚರ್ಮದ ಲಭ್ಯತೆಯೂ ಸಮಸ್ಯೆಯಾಗಿದೆ. ಇದೀಗ ಇಲ್ಲಿಯೇ ಚರ್ಮ ಪಡೆಯುವ ಮೂಲಕ, ಬೇಗನೆ ಚಿಕಿತ್ಸೆ ಪ್ರಾರಂಭಿಸಬಹುದು ಮತ್ತು ನೋವು ಕಡಿಮೆ ಮಾಡಬಹುದು. ಅಂತೆಯೇ ಜೀವ ಉಳಿಸಬಹುದು ಎಂದರು.
ಅಭ್ಯಾಗತರಾಗಿದ್ದ ರೋಟರಿ ಜಿಲ್ಲಾ 3182ನ ಗವರ್ನರ್ ಎಂ. ಜಿ. ರಾಮಚಂದ್ರಮೂರ್ತಿ, ರೋಟರಿಯ ಈ ವರ್ಷದ ಥೀಮ್ ಜೀವನವನ್ನು ಬದಲಾಯಿಸಲು ಸೇವೆ ಮಾಡುವುದು ಆಗಿದೆ.
ರೋಟರಿ ಮತ್ತು ಮಾಹೆ ಜಂಟಿ ಯೋಜನೆ ಜನರ ಜೀವನವನ್ನು ಬದಲಿಸಲು ಸಮುದಾಯಕ್ಕೆ ಸ್ಕಿನ್ ಬ್ಯಾಂಕ್ ನೀಡುತ್ತಿದೆ ಎಂದರು.
ರೋಟರಿಯ ಹಿರಿಯ ಸದಸ್ಯರಾದ ಸದಾನಂದ ಛಾತ್ರ, ರಾಜಾರಾಮ್ ಭಟ್ ಮತ್ತು ಗಣೇಶ್ ನಾಯಕ್ ಜೊತೆಗೂಡಿ ಎಂ. ಜಿ. ರಾಮಚಂದ್ರಮೂರ್ತಿ ಅವರು ಸ್ಕಿನ್ ಬ್ಯಾಂಕ್ ಉಪಕರಣಗಳನ್ನು ಮಾಹೆಗೆ ಹಸ್ತಾಂತರಿಸಿದರು. ಮಾಹೆ ಪರವಾಗಿ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಮತ್ತು ಕೆಎಂಸಿ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ್ಣ ಸ್ವೀಕರಿಸಿದರು
ಗೌರವ ಅತಿಥಿ ನವಿ ಮುಂಬೈನ ನ್ಯಾಷನಲ್ ಬರ್ನ್ ಸೆಂಟರ್ ಮತ್ತು ಸ್ಕಿನ್ ಬ್ಯಾಂಕ್ ನಿರ್ದೇಶಕ ಡಾ. ಸುನಿಲ್ ಕೇಶ್ವಾನಿ, ಮಣಿಪಾಲದಲ್ಲಿ ಸ್ಕಿನ್ ಬ್ಯಾಂಕ್ ಬಂದಿರುವುದು ಕರ್ನಾಟಕಕ್ಕೆ ಮಹತ್ವದ ದಿನವಾಗಿದೆ. ಇದು ಅನೇಕ ಜೀವಗಳನ್ನು ಉಳಿಸಲು ಸಹಾಯವಾಗಲಿದೆ ಎಂದರು.
ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ಚರ್ಮ ದಾನ ಮತ್ತು ಸ್ಕಿನ್ ಬ್ಯಾಂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚರ್ಮ ಸಂಗ್ರಹವಾಗುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅದನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಚ್. ಎಸ್. ಬಲ್ಲಾಳ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ 18 ಹಾಸಿಗೆಗಳುಳ್ಳ ಪೂರ್ಣ ಪ್ರಮಾಣದ ಬರ್ನ್ ಘಟಕ ಇದೆ. ಅದಕ್ಕೆ ಪೂರಕವಾಗಿ ಸ್ಕಿನ್ ಬ್ಯಾಂಕಿನ ಆವಶ್ಯಕತೆ ಇದೆ. ಬಹುತೇಕ ಎಲ್ಲಾ ಸುಟ್ಟಗಾಯ ರೋಗಿಗಳಿಗೆ ಚರ್ಮದ ಕಸಿ ಅಗತ್ಯತೆ ಇದೆ.
ಅಂಗ ಮತ್ತು ಅಂಗಾಂಶ ದಾನವನ್ನು ನಮ್ಮೆಲ್ಲರ ಕರ್ತವ್ಯ ಎಂದು ಪರಿಗಣಿಸಬೇಕು. ಅಂಗ ಮತ್ತು ಅಂಗಾಂಶ ದಾನ ಮಾಡುವುದು ಕೇವಲ ದಾನ ಮಾತ್ರವಲ್ಲ, ಅದು ಬೇರೆಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿದೆ ಎಂದರು.
ರೋಟರಿಯ ಶೇಷಪ್ಪ ರೈ ಸಂದೇಶ ವಾಚಿಸಿದರು. ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ಗಣೇಶ್ ನಾಯಕ್ ಸ್ವಾಗತಿಸಿ, ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು. ಮಾಹೆ ಕಾರ್ಪೊರೇಟ್ ಸಂಬಂಧ ನಿರ್ದೇಶಕ ಡಾ. ರವಿರಾಜ ಎನ್. ಎಸ್. ನಿರೂಪಿಸಿದರು.
ರೋಟರಿ ಕ್ಲಬ್ ಮಣಿಪಾಲ್ ಟೌನ್ ಉಪಕರಣ ಖರೀದಿಸಲು ರೋಟರಿ ಫೌಂಡೇಶನ್ ಜಾಗತಿಕ ಅನುದಾನ ಕಾರ್ಯಕ್ರಮದಡಿ 83 ಲಕ್ಷ ರೂ. ನೀಡಿದ್ದು, ಆವಶ್ಯಕ ಮೂಲಸೌಕರ್ಯಗಳಿಗಾಗಿ ಮಾಹೆ 50 ಲಕ್ಷ ರೂ. ಕೊಡುಗೆಯಾಗಿ ನೀಡಿದೆ.