Wednesday, August 10, 2022
Home ಲೋಕಾಭಿರಾಮ ಆರೋಗ್ಯ ಕೊಲ್ಲೂರು ವ್ಯಾಪ್ತಿಯಲ್ಲಿ ಡೆಂಗ್ಯೂ ನಿರ್ಮೂಲನೆಗೆ ಕ್ರಮ

ಕೊಲ್ಲೂರು ವ್ಯಾಪ್ತಿಯಲ್ಲಿ ಡೆಂಗ್ಯೂ ನಿರ್ಮೂಲನೆಗೆ ಕ್ರಮ

ಸುದ್ದಿಕಿರಣ ವರದಿ
ಸೋಮವಾರ, ಮೇ 23

ಕೊಲ್ಲೂರು ವ್ಯಾಪ್ತಿಯಲ್ಲಿ ಡೆಂಗ್ಯೂ ನಿರ್ಮೂಲನೆಗೆ ಕ್ರಮ
ಬೈಂದೂರು: ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್ ಪ್ರದೇಶದಲ್ಲಿ ನಿರಂತರವಾಗಿ ಕಂಡುಬರುತ್ತಿರುವ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ವತಿಯಿಂದ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದ್ದು, ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅರೋಗ್ಯ ಇಲಾಖೆ ಅವಿರತವಾಗಿ ಶ್ರಮಿಸುತ್ತಿದೆ.

ಕಳೆದ ಮಾರ್ಚ್ ನಿಂದ ಆ ಭಾಗದಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಅಧಿಕವಾಗುತಿದ್ದು, ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ಪ್ರಕರಣ ವರದಿಯಾಗಿದ್ದು, ಅದರಲ್ಲಿ 120ಕ್ಕೂ ಹೆಚ್ಚು ಪ್ರಕರಣಗಳು ಆ ವ್ಯಾಪ್ತಿಯಲ್ಲಿಯೇ ಇದೆ.

ಈಗಾಗಲೇ ಡೆಂಗ್ಯೂ ಪೀಡಿತರಿಗಾಗಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ವಿಶೇಷ ವಾರ್ಡ್ ಸಿದ್ಧಪಡಿಸಿದ್ದು, ಅವುಗಳಲ್ಲಿ ತಲಾ 25 ಪುರುಷರು ಮತ್ತು ಮಹಿಳೆಯರು ಹಾಗೂ ಮತ್ತು 10 ಬೆಡ್ ಗಳನ್ನು ಮಕ್ಕಳಿಗೆ ಮೀಸಲಿಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಂಡ ರಚನೆ
ಹೆಚ್ಚಿನ ಪ್ರಕರಣ ವರದಿಯಾಗುತ್ತಿರುವ ಮುದೂರು ಮತ್ತು ಜಡ್ಕಲ್ ನಲ್ಲಿ ನಿರಂತರ ನಿಗಾ ವಹಿಸಲು ಆರೋಗ್ಯಾಧಿಕಾರಿಗಳನ್ನೊಳಗೊಂಡ 13 ತಂಡ ರಚಿಸಿದ್ದು, ಆ ತಂಡದ ಸದಸ್ಯರು ಪ್ರತಿ ದಿನ ಮನೆ ಮನೆಗೆ ತೆರಳಿ ಡೆಂಗ್ಯೂ ಕುರಿತು ಅರಿವು ಮೂಡಿಸುವ ಜೊತೆಗೆ ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡಲಾಗುತ್ತಿದೆ.

ಈ ಎರಡೂ ಗ್ರಾಮಗಳ ಮನೆಗಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಉಚಿತವಾಗಿ ಸೊಳ್ಳೆ ಪರದೆ ಸರಬರಾಜು ಮಾಡಲಾಗಿದ್ದು, ಎಲ್ಲಾ ಮನೆಗಳಿಗೆ ತಲಾ 2 ಬಾಟಲ್ ಡಿಎಂಪಿ ತೈಲ ವಿತರಿಸಲಾಗಿದೆ.

ನಿಯಂತ್ರಣ ಕ್ರಮ
ಡೆಂಗ್ಯೂ ಪೀಡಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ತುರ್ತು ಅಗತ್ಯಕ್ಕಾಗಿ 2 ಆ್ಯಂಬುಲೆನ್ಸ್ ನಿಯೋಜಿಸಲಾಗಿದ್ದು, ಗ್ರಾಮದಲ್ಲಿ ಪ್ರತಿದಿನ ಫಾಗಿಂಗ್ ಮಾಡಲಾಗುತ್ತಿದೆ.

ಅಲ್ಲದೇ, ಗ್ರಾಮ ವ್ಯಾಪ್ತಿಯಲ್ಲಿ ಬೀದಿ ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನ ಮೂಲಕ ಅರಿವು ಮೂಡಿಸಲಾಗುತ್ತಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡೆಂಗ್ಯೂ ನಿಯಂತ್ರಣ ಕುರಿತು ಮಾಹಿತಿ ನೀಡಿ, ಅದನ್ನು ಮನೆಗಳಲ್ಲಿ ಪೋಷಕರ ಮೂಲಕ ಅನುಷ್ಠಾನ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೇ, ಆ ವ್ಯಾಪ್ತಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಚರ್ಚುಗಳ ವಾರದ ಪ್ರಾರ್ಥನೆ ಸಮಯದಲ್ಲಿಯೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ.

ಆರೋಗ್ಯ ಇಲಾಖೆ ಪ್ರಕಾರ ಆ ಪ್ರದೇಶದಲ್ಲಿ ರಬ್ಬರು ಮತ್ತು ಅನಾನಸು ಗಿಡಗಳು ಅಧಿಕವಾಗಿದ್ದು, ರಬ್ಬರ್ ಪ್ಲಾಂಟೇಷನ್ ಗಳಲ್ಲಿ ರಬ್ಬರ್ ಹಾಲಿನ ಸಂಗ್ರಹಕ್ಕೆ ಇಟ್ಟಿರುವ ಗೆರಟೆಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಸೊಳ್ಳೆಯ ಲಾರ್ವಾ ಹುಟ್ಟುತ್ತಿದ್ದು, ಅದು ಡೆಂಗ್ಯೂ ಸೊಳ್ಳೆ ಏಡಿಸ್ ಉಗಮಕ್ಕೆ ಕಾರಣ ಎನ್ನಲಾಗುತ್ತಿದೆ.

ಅದರೊಂದಿಗೆ ಅನಾನಸ್ ಗಿಡದ ಎಲೆಗಳ ನಡುವೆ ನಿಂತ ನೀರಿನಲ್ಲಿ ಮತ್ತು ಅಡಿಕೆ ತೋಟದ ಅಡಿಕೆ ಹಾಳೆಗಳಲ್ಲೂ ಡೆಂಗ್ಯೂ ಹರಡುವ ಸೊಳ್ಳೆ ಉಗಮವಾಗುತ್ತಿದ್ದು, ಆ ಬಗ್ಗೆ ತೋಟಗಳ ಮಾಲೀಕರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಅರಿವು ಮೂಡಿಸಲಾಗಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳ ನಿಗಾ
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಸಂಬಂಧಪಟ್ಟ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ನಿಯಂತ್ರಣಾ ಕ್ರಮಗಳ ಬಗ್ಗೆ ನಿರ್ದೇಶನಗಳನ್ನೂ ನೀಡಿದ್ದು, ಆ ನಿರ್ದೇಶನಗಳ ಪಾಲನೆ ಹಾಗೂ ಪ್ರತಿದಿನ ಅಲ್ಲಿನ ಪರಿಸ್ಥಿತಿ ಬಗ್ಗೆ ವರದಿ ಪಡೆಯಲಾಗುತ್ತಿದೆ.

ಜಿಲ್ಲಾಡಳಿತ ವತಿಯಿಂದ ಡೆಂಗ್ಯೂ ನಿಯಂತ್ರಣಕ್ಕೆ ನೀಡಿರುವ ಎಲ್ಲಾ ರೀತಿಯ ನೆರವು ಹಾಗೂ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲಾಗಿದ್ದು, ಆರೋಗ್ಯ ಇಲಾಖೆ ವತಿಯಿಂದ ಜಿಲ್ಲಾಡಳಿತ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

ಆ ಪ್ರದೇಶದಿಂದ ಡೆಂಗ್ಯೂ ಜ್ವರ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚದಂತೆ ನಿರಂತರ ನಿಗಾ ವಹಿಸಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಕಾಳಜಿ ಅಗತ್ಯ
ಪ್ರಸ್ತುತ ಎಲ್ಲಡೆ ಮಳೆ ಅಧಿಕವಾಗುತ್ತಿದ್ದು, ಆ ಪ್ರದೇಶಗಳ ಸಾರ್ವಜನಿಕರು ತಮ್ಮ ಆರೋಗ್ಯದ ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ಜ್ವರ ಬಂದರೂ ನಿರ್ಲಕ್ಷ್ಯವಹಿಸದೇ, ಮುದೂರು ಉಪ ಆರೋಗ್ಯ ಕೇಂದ್ರ, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ತೆರೆದಿರುವ ಫೀವರ್ ಕ್ಲಿನಿಕ್ ನಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ ಭಟ್ ತಿಳಿಸಿದ್ದಾರೆ.

ಡೆಂಗ್ಯೂ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ರೀತಿಯ ಔಷಧಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ.

ಸಾರ್ವಜನಿಕರು ಮನೆಯಿಂದ ಹೊರ ಹೋಗುವಾಗ ಸೊಳ್ಳೆ ಕಡಿತದಿಂದ ಪಾರಾಗಲು ಸಂಪೂರ್ಣ ಮೈ ಮುಚ್ಚುವಂಥ ಬಟ್ಟೆ ಧರಿಸಬೇಕು. ಮನೆಯಲ್ಲಿ ಸೊಳ್ಳೆ ಪರದೆ ಬಳಸಬೇಕು.

ಮನೆಯ ಸಮೀಪದಲ್ಲಿ ತ್ಯಾಜ್ಯ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವ ಜೊತೆಗೆ ಸೊಳ್ಳೆಗಳ ಬೆಳವಣಿಗೆಗೆ ಅವಕಾಶ ನೀಡಬಾರದು. ಆ ಮೂಲಕ ಆ ಪ್ರದೇಶದಲ್ಲಿ ಡೆಂಗ್ಯೂ ನಿರ್ಮೂಲನೆಗೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಡಾ. ಭಟ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!